ಬೆಂಗಳೂರು: ಸುರಂಗ ಮಾರ್ಗದಲ್ಲಿ ಮೊದಲ ಪ್ರಾಯೋಗಿಕ ಸಂಚಾರ ನಡೆಸುವ ಮೂಲಕ ನಮ್ಮ ಮೆಟ್ರೋ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಸಾಕಷ್ಟು ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಎಂ.ಜಿ.ರಸ್ತೆಯಿಂದ ಕಬ್ಬನ್ ಪಾರ್ಕ್ ನಿಲ್ದಾಣದವರೆಗೆ ಒಂದು ಬದಿಯಲ್ಲಿ ಗುರುವಾರ ಪ್ರಾಯೋಗಿಕ ಸಂಚಾರ ನಡೆಸಲಾಯಿತು. ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲಾ ಸಮ್ಮುಖದಲ್ಲಿ ಬೆಳಗ್ಗೆ ಹಾಗೂ ಸಂಜೆ ಎರಡು ಬಾರಿ ಪ್ರಾಯೋಗಿಕ ಸಂಚಾರ ನಡೆಸಲಾಯಿತು.
ಬೆಂಗಳೂರಿನಲ್ಲಿ ಸುಮಾರು 8.8 ಕಿ.ಮೀ, ಸುರಂಗ ಮಾರ್ಗವಿದ್ದು ಅದರಲ್ಲಿ 4.8 ಕಿ.ಮೀ ಸುರಂಗ ಮಾರ್ಗ ಕಾಮಗಾರಿ ಅಂತ್ಯಗೊಂಡಿದೆ. ಈ ಹಿನ್ನೆಲೆಯಲ್ಲಿ ಎಂ.ಜಿ.ರಸ್ತೆಯಿಂದ ಮಾಗಡಿ ರಸ್ತೆವರೆಗೆ ಪ್ರಾಯೋಗಿಕ ಸಂಚಾರ ನಡೆಸಲು ನಮ್ಮ ಮೆಟ್ರೋ ನಿರ್ಧರಿಸಿದೆ. ಮೊದಲ ಪ್ರಯತ್ನವಾಗಿ ಅತಿ ಕಡಿಮೆ ವೇಗದಲ್ಲಿ ಎಂ.ಜಿ.ರಸ್ತೆಯಿಂದ ಕಬ್ಬನ್‍ಪಾರ್ಕ್ ನಿಲ್ದಾಣದವರೆಗೆ ಸಂಚರಿಸಲಾಯಿತು. ಯಶಸ್ವಿ ಸಂಚಾರದ ಬಳಿಕ ಹೀಗೆಯೇ ಮಾಗಡಿ ರಸ್ತೆಯವರೆಗೂ ಪ್ರಾಯೋಗಿಕ ಸಂಚಾರವನ್ನು ಭಾನುವಾರದವರೆಗೆ ಹಂತಹಂತವಾಗಿ ನಡೆಸಲು ತೀರ್ಮಾನಿಸಲಾಯಿತು. ಸುರಂಗ ಮಾರ್ಗದಲ್ಲಿ ಮೊದಲ ಸಂಚಾರವಾಗಿದ್ದರಿಂದ 10 ಕಿ.ಮೀ ವೇಗದಲ್ಲಿ ರೈಲನ್ನು ಚಲಾಯಿಸಲಾಯಿತು. ಮತ್ತೊಂದೆಡೆ ದ್ವಿಮುಖ ಸಂಚಾರಕ್ಕಾಗಿ ಮತ್ತೊಂದು ಹಳಿಯ ಕಾಮಗಾರಿಯನ್ನು ವೇಗವಾಗಿ ಮಾಡಲಾಗುತ್ತಿದೆ. ಮಾಗಡಿ ರಸ್ತೆಯವರೆಗೂ ಏಕಮುಖ ಸಂಚಾರಕ್ಕೆ ಸಂಪೂರ್ಣ ವ್ಯವಸ್ಥೆಯಾಗಿದೆ.
ಏಪ್ರಿಲ್ ತಿಂಗಳಲ್ಲಿ 2ನೇ ಹಂತ ಕಾಮಗಾರಿ
ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ಏಪ್ರಿಲ್ ತಿಂಗಳ ಎರಡನೇ ವಾರದಿಂದ ಆರಂಭವಾಗಲಿದೆ. ನಾಯಂಡಹಳ್ಳಿಯಿಂದ ಕೆಂಗೇರಿವರೆಗಿನ 6.46 ಕಿ.ಮೀ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, 10 ದಿನದಲ್ಲಿ ಅಂತಿಮ ಆದೇಶ ಹೊರಬೀಳಲಿದೆ. ತಿಂಗಳೊಳಗೆ ಕಾಮಗಾರಿ ಆರಂಭವಾಗಲಿದೆ. ಈ ಅಂತರದಲ್ಲಿ ಒಟ್ಟು 5 ನಿಲ್ದಾಣಗಳು ಬರಲಿವೆ ಎಂದು ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲಾ ತಿಳಿಸಿದ್ದಾರೆ. ಮೆಟ್ರೋ 2ನೇ ಹಂತಕ್ಕೆ ರು. 26,405 ಕೋಟಿ ವೆಚ್ಚವಾಗಲಿದೆ.ಬೈಯಪ್ಪನಹಳ್ಳಿಯಿಂದ ವೈಟ್ ಫಿಲ್ಡ್ 15.50 ಕಿ.ಮೀ, ಹೆಸರಘಟ್ಟದಿಂದ ಬಿಐಇಸಿಗೆ 3.77 ಕಿ.ಮೀ, ಪುಟ್ಟೇನಹಳ್ಳಿ ಕ್ರಾಸ್‍ನಿಂದ ಅಂಜನಾಪುರ ಟೌನ್‍ಶಿಪ್‍ಗೆ 6.29 ಕಿ.ಮೀ, ಗೊಟ್ಟಿಗೆರೆ- ಐಐಎಂಬಿ-ನಾಗವಾರ ಮಾರ್ಗದಲ್ಲಿ 21.25 ಕಿ.ಮೀ ಹಾಗೂ ಆರ್ ವಿ ರಸ್ತೆಯಿಂದ ಬೊಮ್ಮಸಂದ್ರ 18.82 ಕಿ.ಮೀ ಮಾರ್ಗದ ಕಾಮಗಾರಿಯೂ ಶೀಘ್ರವೇ ಆರಂಭವಾಗಲಿದೆ ಎಂದು ಅವರು ಹೇಳಿದರು.
ವರ್ಷಾಂತ್ಯಕ್ಕೆ ಮೊದಲ ಹಂತ
ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿ ಶೇ.93ರಷ್ಟು ಪೂರ್ಣಗೊಂಡಿದ್ದು, ಡಿಸೆಂಬರ್ ಅಂತ್ಯದೊಳಗೆ ಸಂಚಾರ ಆರಂಭವಾಗಲಿದೆ. ಇದಕ್ಕೆ ಪೂರಕವಾದ ಬಜೆಟ್ ಲಭ್ಯವಿದ್ದು, ಕಾಮಗಾರಿ ಯುದ್ಧೋಪಾದಿಯಲ್ಲಿ ಸಾಗುತ್ತಿದೆ. ಮೆಜೆಸ್ಟಿಕ್ ಜಂಕ್ಷನ್ ನಿರ್ಮಾಣವೇ ದೊಡ್ಡ ಸಮಸ್ಯೆಯಾಗಿದೆ. ಆದಾಗ್ಯೂ ಇನ್ನೆರಡು ತಿಂಗಳಲ್ಲಿ ಮೆಜೆಸ್ಟಿಕ್ ನಿಲ್ದಾಣಗಳ ಕಾಮಗಾರಿ ಮುಗಿಯಲಿದೆ. ಹಾಗೆಯೇ ಕೆ.ಆರ್.ಮಾರುಕಟ್ಟೆಯಿಂದ ಮೆಜೆಸ್ಟಿಕ್‍ಗೆ ಬರುವ ಸುರಂಗ ಮಾರ್ಗದ ಕಾಮಗಾರಿ ಕೂಡ ಅಂತಿಮ ಹಂತದಲ್ಲಿದೆ ಎಂದು ಕರೋಲಾ ತಿಳಿಸಿದರು. ಜೂನ್ ತಿಂಗಳಿಂದ ಈ ನಿಲ್ದಾಣ ಹಾಗೂ ಮಾರ್ಗಗಳಲ್ಲಿ ಪ್ರಾಯೋಗಿಕ ಸಂಚಾರ ಆರಂಭವಾಗಲಿದ್ದು, ಎಲ್ಲ ಸುರಕ್ಷಾ ನಿಯಮಗಳನ್ನು ಪೂರೈಸಲಾಗುತ್ತದೆ. ಇಷ್ಟರೊಳಗೆ ಮೆಜೆಸ್ಟಿಕ್‍ನಿಂದ ಉಳಿದೆಲ್ಲ ಮಾರ್ಗಗಳಿಗೆ ಮತ್ತೊಂದು ಕಡೆಯ ಹಳಿ ನಿರ್ಮಿಸಲಾಗುತ್ತದೆ ಎಂದು ಅವರು ಹೇಳಿದರು.
ವಿಧಾನಸೌಧಕ್ಕೆ ಹಳೆಯ ಮೆರುಗು
ವಿಧಾನಸೌಧ ಹಾಗೂ ಕಬ್ಬನ್ ಪಾರ್ಕ್ ಬಳಿಯ ರಸ್ತೆಗಳು ಇನ್ನೆರಡು ತಿಂಗಳಲ್ಲಿ ಹಳೆಯ ಸ್ವರೂಪಕ್ಕೆ ಬರಲಿವೆ. ಈ ಮಾರ್ಗದಲ್ಲಿನ ಸುರಂಗಮಾರ್ಗ ಕಾಮಗಾರಿ ಬಹುತೇಕ ಮುಗಿದಿದ್ದು, ರಸ್ತೆ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಇನ್ನು ಸುರಂಗಮಾರ್ಗದಲ್ಲಿ ನಿಲ್ದಾಣ ನಿರ್ಮಾಣ ಕಾರ್ಯವೂ ಕೊನೆಯ ಹಂತದಲ್ಲಿದೆ ಎಂದು ಕರೋಲಾ ಸ್ಪಷ್ಟಪಡಿಸಿದರು.
ನಾಯಂಡಹಳ್ಳಿ ಮಾರ್ಗ ಜೂನ್‍ನಿಂದ ಆರಂಭ
ಮಾಗಡಿ ರಸ್ತೆಯಿಂದ ನಾಯಂಡಹಳ್ಳಿವರೆಗಿನ ಮೆಟ್ರೋ ಸಂಚಾರ ಸಾರ್ವಜನಿಕರಿಗೆ ಜೂನ್ ತಿಂಗಳಿಂದ ಆರಂಭವಾಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಎಂ.ಜಿ.ರಸ್ತೆಯಿಂದ ರೈಲುಗಳನ್ನು ಮಾಗಡಿ ರಸ್ತೆಗೆ ಸ್ಥಳಾಂತರಿಸಲಾಗುತ್ತಿದೆ. ಭಾನುವಾರದಿಂದ ಆ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ನಡೆಯಲಿದೆ. ಸುಮಾರು 3 ತಿಂಗಳ ಪ್ರಾಯೋಗಿಕ ಸಂಚಾರದ ಬಳಿಕ ಸಾರ್ವಜನಿಕ ಸೇವೆಗೆ ತೆರೆದುಕೊಳ್ಳಲಿದೆ. ಕಾಮಗಾರಿ ಪೂರ್ಣಗೊಂಡು ಸುಮಾರು 2 ವರ್ಷಗಳಾಗಿದ್ದರೂ ಈ ಮಾರ್ಗದಲ್ಲಿ ಸಂಚಾರ ಆರಂಭವಾಗಿರಲಿಲ್ಲ. ಬೈಯಪ್ಪನಹಳ್ಳಿಯಿಂದ ರೈಲುಗಳನ್ನು ಮಾಗಡಿ ರಸ್ತೆಗೆ ತೆಗೆದುಕೊಂಡು ಹೋಗಲು ಅಗತ್ಯ ಮಾರ್ಗ ಲಭ್ಯವಿರಲಿಲ್ಲ. ಈಗ ಎಂ.ಜಿ.ರಸ್ತೆಯಿಂದ ಮಾಗಡಿ ರಸ್ತೆವರೆಗೂ ಒಂದು ಬದಿಯ ಹಳಿಯ ಕಾಮಗಾರಿ ಸಂಪೂರ್ಣಗೊಂಡಿರುವುದರಿಂದ ಸಂಚಾರಕ್ಕಿದ್ದ ಅಡೆತಡೆ ನಿವಾರಣೆಯಾಗಿದೆ.