ಜಿಲ್ಲಾ ಸುದ್ದಿ

ಪೆಟ್ರೋಲ್ ಕೊರತೆ ಪರದಾಡುತ್ತಿದೆ ಜನತೆ

Rashmi Kasaragodu

ಬೆಂಗಳೂರು/ನವದೆಹಲಿ: ಉತ್ತರ ಕರ್ನಾಟಕದ ತೈಲ ಅಭಾವದ ಬಿಸಿ ದೆಹಲಿಗೂ ಮುಟ್ಟಿದೆ. ಗುರುವಾರ ಪೆಟ್ರೋಲಿಯಂ ಖಾತೆ ಕಾರ್ಯದರ್ಶಿ ಹಾಗೂ ತೈಲ ಮಾರುಕಟ್ಟೆ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರ ಸಭೆ ಕರೆಯಲಾಗಿದೆ.

ಇದೇ ವೇಳೆ ಜನಪ್ರತಿನಿಧಿಗಳ ಪ್ರಯತ್ನ, ಅಧಿಕಾರಿಗಳ ಭರವಸೆ ನಡುವೆಯೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ಅಭಾವ ಮುಂದುವರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಗದಗ, ಧಾರವಾಡ ಜಿಲ್ಲೆಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ಜನರನ್ನು ಚಿಂತೆಗೀಡು ಮಾಡಿದೆ. ತಾಸುಗಟ್ಟಲೆ ಬಂಕ್‍ಗಳ ಮುಂದೆ ಸಾಲು ನಿಂತು ಪಡಿತರದಂತೆ ಪೆಟ್ರೋಲ್ ಪಡೆಯುವ ಅನಿವಾರ್ಯತೆ ಎದುರಾಗಿದೆ. ಎಲ್ಲ ಬಂಕ್‍ಗಳ ಮುಂದೆ ಬೈಕ್ ಹಾಗೂ ಕಾರುಗಳ ದೊಡ್ಡ ಸಾಲು ದಿನವಿಡೀ ಕಂಡುಬಂತು. ರಾತ್ರಿ ಬಂಕ್ ಮುಚ್ಚುವ ಸಮಯದವರೆಗೂ ನೂಕು ನುಗ್ಗಲಿತ್ತು. ಒಂದು ಗಂಟೆಗೂ ಹೆಚ್ಚು ಕಾಲ ಸರದಿಯಲ್ಲಿ ನಿಂತರೂ ಒಬ್ಬರಿಗೆ ಕೇವಲ ರು. 100 ಮೌಲ್ಯದ ಪೆಟ್ರೋಲ್ ಹಾಕುತ್ತಿದ್ದುದು ಗ್ರಾಹಕರಲ್ಲಿ ಬೇಸರ ಉಂಟು ಮಾಡಿತ್ತು. ಪೆಟ್ರೋಲ್ ಇಲ್ಲದೆ ಹಲವು ಬಂಕ್ ಗಳು ಮುಚ್ಚಿದ್ದವು.

ಸುಸ್ತಾದ ಜನತೆ:
ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಪೆಟ್ರೋಲ್ ಅಭಾವ ಮುಂದುವರಿದಿದ್ದು, ವಾಹನ ಸವಾ ರರು ಪೆಟ್ರೋಲ್ ಬಂಕ್‍ಗಳನ್ನು ಸುತ್ತಿ ಸುತ್ತಿ ಸುಸ್ತಾಗಿದ್ದಾರೆ. ಆದರೆ ಡೀಸೆಲ್ ಪೂರೈಯಲ್ಲಿ ಪರಿಸ್ಥಿತಿ ಸುಧಾರಿಸಿದ್ದು, ಬುಧವಾರದಿಂದ ಎಲ್ಲೆಡೆ ಡೀಸೆಲ್ ಲಭ್ಯವಾಗುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಡೀಸೆಲ್‍ನ ಸ್ವಲ್ಪ ಮಟ್ಟಿನ ಸಮಸ್ಯೆ ಎದುರಾಗಿದ್ದರೂ ನಗರ ಪ್ರದೇಶದಲ್ಲಿ, ಹೆದ್ದಾರಿಗಳ ಪೆಟ್ರೋಲ್ ಬಂಕ್‍ಗಳಲ್ಲಿ ಲಭ್ಯವಿದೆ.

ಬೆಳಗಾವಿ ನಗರದಲ್ಲಿ ಕೇವಲ 6 ಪೆಟ್ರೋಲ್ ಬಂಕ್ ನಲ್ಲಿ ಮಾತ್ರ ಪೆಟ್ರೋಲ್ ಲಭ್ಯವಿದ್ದರೆ, ಬಾಗಲಕೋಟೆ ನಗರದ ಆರು ಪೆಟ್ರೋಲ್ ಬಂಕ್‍ನಲ್ಲಿ ಮಾತ್ರ ಪೆಟ್ರೋಲ್ ವಿತರಿಸಲಾಗುತ್ತಿದೆ. ಲಭ್ಯವಿರುವ  ಪೆಟ್ರೋಲ್ ಬಂಕ್‍ನ ಎದುರು ಭಾರೀ ವಾಹನ ಸಾಲು ಕಂಡು ಬರುತ್ತಿದೆ. ಬಹುತೇಕ ಪೆಟ್ರೋಲ್ ಬಂಕ್‍ಗಳಲ್ಲಿ ದ್ವಿಚಕ್ರ ವಾಹನಗಳಿಗೆ ಕೇವಲ ಒಂದು ಲೀಟರ್ ಪೆಟ್ರೋಲ್ ನೀಡುತ್ತಿದ್ದಾರೆ. ರಸ್ತೆಗಳಲ್ಲಿ, ಮನೆ ಗಳಲ್ಲೇ ನಿಂತಿರುವ ವಾಹನಕ್ಕೆ ಇಂಧನ ತುಂಬಿಸಿ ಕೊಳ್ಳಲು ಗ್ರಾಹಕರು ಕ್ಯಾನ್, ಬಾಟಲ್‍ಗಳನ್ನು ಹಿಡಿದು ಪೆಟ್ರೋಲ್ ಬಂಕ್‍ನತ್ತ ಧಾವಿಸುತ್ತಿರುವ ದೃಶ್ಯಗಳು ಕಂಡಿವೆ.

ಕೃಷಿಗೆ ಅಡ್ಡಿ :
ಯಾದಗಿರಿ ಜಿಲ್ಲೆಯಲ್ಲಿ 10 ದಿನಗಳಿಂದ ಪೆಟ್ರೋಲ್- ಡೀಸೆಲ್ ಬಂಕ್‍ಗಳಲ್ಲಿ ನೋ ಸ್ಟಾಕ್ ಎಂಬ ಬೋರ್ಡ್‍ಗಳೇ ಕಾಣುತ್ತಿವೆ. ಜಿಲ್ಲೆಯ ಸುರಪುರ, ಶಹಾಪುರ ತಾಲೂಕುಗಳಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಅಭಾವ ತಲೆದೋರಿದೆ.

ರಾಯಚೂರು ಜಿಲ್ಲೆಯಲ್ಲಿ ಅಕಾಲಿಕ ಮಳೆ ಸುರಿದ ನಂತರ ಕೃಷಿ ಕಾರ್ಯ ಚುರುಕುಗೊಂಡು ಗ್ರಾಮೀಣ ಪ್ರದೇಶ ಗಳಲ್ಲಿ ಡೀಸೆಲ್ ಬರ ಎದುರಾಗಿದೆ. ಐಒಸಿಯ ಬಂಕ್‍ಗಳಲ್ಲಿ ನೋ ಸ್ಟಾಕ್ ಎಂಬ ಬೋರ್ಡ್ ಸಾಮಾನ್ಯವಾಗಿದೆ. ಉಳಿದಂತೆ ಹಿಂದು ಸ್ತಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋ ಲಿಯಂ ಕಂಪನಿಗಳ ಬಂಕ್ ಗಳಲ್ಲಿ ಲಭ್ಯವಿದ್ದರೂ ಅಗತ್ಯ ತೈಲ ಪೂರೈಕೆಯಾಗುತ್ತಿಲ್ಲ. ಪ್ರತಿಯೊಂದು ಬಂಕ್ ವಾರಕ್ಕೆ ಕನಿಷ್ಠ 4 ಟ್ಯಾಂಕ್ ಸರಬರಾಜಾಗುತ್ತಿದ್ದ ತೈಲ ಈಗ ಕೇವಲ ಒಂದು ಟ್ಯಾಂಕರ್ ಮಾತ್ರ ಬರುತ್ತಿದೆ. ಇದರಿಂದ ತೀವ್ರ ತೊಂದರೆಯಾಗಿದೆ. ಇನ್ನೊಂದೆಡೆ ಕಾಳ ಸಂತೆಯಲ್ಲಿ ಪೆಟ್ರೋಲ್, ಡೀಸೆಲ್ ಅವ್ಯಾಹತವಾಗಿ ಮಾರಾಟವಾಗುತ್ತಿದೆ. ಪ್ರತಿ ಲೀ.ಗೆ ದುಪ್ಪಟ್ಟು ಬೆಲೆಗೆ ಮಾರುತ್ತಿದ್ದಾರೆ. ಗ್ರಾಹಕರು ರೋಸಿ ಹೋಗಿದ್ದು ಬಂಕ್‍ಗಳ ಮಾಲೀಕರೊಂದಿಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ.

ಮಹತ್ವದ ಸಭೆ ಇಂದು
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ  ಎದುರಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ನೀಗಿಸಲು ಗುರುವಾರ ದೆಹಲಿಯಲ್ಲಿ ಪೆಟ್ರೋಲಿಯಂ ಖಾತೆ ಕಾರ್ಯದರ್ಶಿ ಹಾಗೂ ತೈಲ ಮಾರುಕಟ್ಟೆ  ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರ ಸಭೆ ಕರೆಯಲಾಗಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಪೆಟ್ರೋಲ್, ಡೀಸೆಲ್ ಕೊರತೆಗೆ ಎಂಆರ್‍ಪಿಎಲ್ ಸಂಸ್ಕರಣ ಘಟಕದಲ್ಲಿನ ತಾಂತ್ರಿಕ ದೋಷ ಮತ್ತು ಬೆಳಗಾವಿ ತೈಲ ಸಂಗ್ರಹಾಗಾರದಲ್ಲಿ ಆದ ತಾಂತ್ರಿಕ ದೋಷ ಕಾರಣ ಎಂದು ಅ„ಕಾರಿಗಳು ಹೇಳಿದ್ದಾರೆ. ಆದರೆ, ತಕ್ಷಣ ಸಮಸ್ಯೆ ನೀಗಿಸಲು ಸಭೆ ಕರೆಯಲಾಗಿದೆ. ಈಗಾಗಲೇ ಅಭಾವ ನೀಗಿಸಲು ಕ್ರಮ ಕೈಗೊಂಡಿರುವುದಾಗಿ ಕಾರ್ಯದರ್ಶಿ ತಿಳಿಸಿದ್ದಾರೆ ಎಂದು ಜೋಶಿ ಸುದ್ದಿಗಾರರಿಗೆ ತಿಳಿಸಿದರು. `ಈ ವಿಷಯವನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ. ಅಗತ್ಯ ಬಿದ್ದರೆ, ಪ್ರಧಾನಿ ಗಮನಕ್ಕೆ ತರುವುದಾಗಿಯೂ ಅಧಿಕಾರಿಗಳಿಗೆ ತಿಳಿಸಿದ್ದೇನೆ' ಎಂದು ಜೋಶಿ ಸುದ್ದಿಗಾರರಿಗೆ ತಿಳಿಸಿದರು.

SCROLL FOR NEXT