ಪ್ರೌಢ ಶಿಕ್ಷಣ ಇಲಾಖೆ ಇತಿಹಾಸದಲ್ಲೇ ಗರಿಷ್ಠ ಫಲಿತಾಂಶ, ಉಡುಪಿಗೆ ಮೊದಲ ಸ್ಥಾನ, ಗದಗಕ್ಕೆ ಕಡೇ ಸ್ಥಾನ, 36 ಶಾಲೆಗಳಲ್ಲಿ ಶೂನ್ಯ
ಬೆಂಗಳೂರು: ಎಸ್‍ಎಸ್‍ಎಲ್‍ಸಿ ಫಲಿತಾಂಶ ಈ ಬಾರಿ ಶೇ.81.82ಕ್ಕೆ ಏರಿದ್ದು, ವಿದ್ಯಾರ್ಥಿನಿಯರು ಹಾಗೂ ಗ್ರಾಮೀಣ ಪರೀಕ್ಷಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಶ್ರೇಣೀಕೃತ ವ್ಯವಸ್ಥೆಯಲ್ಲಿ ನಡೆದ ಮೊದಲ ಪರೀಕ್ಷೆ ಇದಾಗಿದ್ದು, ಫಲಿತಾಂಶದಲ್ಲಿ ಕಳೆದ ಶೈಕ್ಷಣಿಕ ವರ್ಷಕ್ಕಿಂತ ಶೇ.0.63ರಷ್ಟು ಏರಿಕೆಯಾಗಿದೆ. ಶಿರಸಿಯ ವಿಶ್ವಜೀತ್ ಹೆಗಡೆ 623 ಅಂಕ ಪಡೆದು ರಾಜ್ಯಕ್ಕೇ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಐವರು ವಿದ್ಯಾರ್ಥಿಗಳು 622 ಹಾಗೂ 15 ವಿದ್ಯಾರ್ಥಿಗಳು 621 ಅಂಕ ಪಡೆದು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿಕೊಂಡಿದ್ದಾರೆ.
ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ, ಚಿಕ್ಕೋಡಿ ಹಾಗೂ ಉತ್ತರ ಕನ್ನಡ ಮೊದಲ ಮೂರು ಸ್ಥಾನ ಪಡೆದರೆ, ಗದಗ, ಕೊಪ್ಪಳ ಹಾಗೂ ಕಲಬುರಗಿ ಕೊನೆಯ ಮೂರು ಸ್ಥಾನ ಗಳಿಸಿವೆ.
ಹಾಗೆಯೇ 2485 ಶಾಲೆಗಳು ಶೇ.100ರಷ್ಟು ಫಲಿತಾಂಶ ಸಾಧಿಸಿದ್ದರೆ, 36 ಶಾಲೆಗಳು ಶೂನ್ಯ ಫಲಿತಾಂಶ ಮಾಡಿವೆ. ಫಲಿತಾಂಶವಾರುಲೆಕ್ಕಾಚಾರದಲ್ಲಿ ಖಾಸಗಿ ಶಾಲೆಗಳು ಮುಂದಿದ್ದು,
ಸರ್ಕಾರಿ ಶಾಲೆಗಳು ಕೊಂಚ ಎಡವಿವೆ. ಆದರೆ ಶೇ.100ರಷ್ಟು ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳ ಪಟ್ಟಿ ಹೆಚ್ಚಿದೆ. ವಿಶೇಷವೆಂದರೆ ಯಾವ ಸರ್ಕಾರಿ ಶಾಲೆಯೂ ಶೂನ್ಯ ಫಲಿತಾಂಶ ಮಾಡಿಲ್ಲ.
ಶಿಕ್ಷಕರು, -ಪಾಲಕರ ಸಹಾಯದಿಂದ ರಾಜ್ಯಕ್ಕೆ ಮೊದಲಿಗನಾಗಿದ್ದೇನೆ ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ. ಸದ್ಯಕ್ಕೆ ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆದು ಐಐಟಿಯಲ್ಲಿ ತಾಂತ್ರಿಕ ಶಿಕ್ಷಣ ಪಡೆಯುವ ಕನಸು ಹೊಂದಿದ್ದೇನೆ. ಹೆಚ್ಚು ಅಂಕ ಪಡೆಯಲು ಪುಸ್ತಕದ ಹುಳು ಆಗಬೇಕಿಲ್ಲ, ನಾನು ಡಿಸೆಂಬರ್‍ನಿಂದ ಮರು ಪಠಣ ಆರಂಭಿಸಿದ್ದೆ, ಇದರಿಂದ ಹೆಚ್ಚು ಅಂಕ ಪಡೆಯಲು ನೆರವಾಯಿತು.
-ವಿಶ್ವಜೀತ್ ಹೆಗಡೆ
ಜಿಲ್ಲಾವಾರು
ಮೊದಲ ಸ್ಥಾನ ಉಡುಪಿ
ದ್ವಿತೀಯ ಸ್ಥಾನ ಚಿಕ್ಕೋಡಿ
ತೃತೀಯ ಸ್ಥಾನ ಉತ್ತರ ಕನ್ನಡ
ಕಡೇ ಸ್ಥಾನ ಗದಗ