ಮೈಸೂರು: ನಿವೃತ್ತ ಐಎಎಸ್ ಅಧಿಕಾರಿ ಪುತ್ರಿ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ.
ಈ ಸಂಬಂಧ ಸರ್ಕಾರದಿಂದ ಬುಧವಾರ ಆದೇಶ ಬಂದಿರುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ಹಿಂದಿನ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀ ಅವರು ಸಿಐಡಿಗೆ ತನಿಖೆ ಹೊಣೆ ವಹಿಸಲು ಶಿಫಾರಸು ಮಾಡಿದ್ದರು. ಅದರಂತೆ ರಾಜ್ಯ ಸರ್ಕಾರವು ಸಿಐಡಿಗೆ ತನಿಖೆಗೆ ಆದೇಶಿಸಿದೆ ಎಂದು ಅವರು ಹೇಳಿದರು.
ಏನಿದು ಪ್ರಕರಣ?: ನಿವೃತ್ತ ಐಎಎಸ್ ಅಧಿಕಾರಿ ಪುತ್ರಿಯು ಏ.17ರಂದು ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಅತ್ತೆ-ಮಾವ ಮತ್ತು ಭಾವನ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಅತ್ಯಾಚಾರ ದೂರು ನೀಡಿದ್ದರು. ನಂತರ ಪ್ರಕರಣ ನಡೆದಿರುವುದು ಮೈಸೂರಿನಲ್ಲಿ ಎಂಬ ಕಾರಣಕ್ಕಾಗಿ ನಗರದ ವಿವಿ ಪುರಂ ಠಾಣೆಗೆ ವರ್ಗಾಯಿಸಲಾಗಿತ್ತು.
ಪ್ರಕರಣದಲ್ಲಿ ಡಾ.ಪ್ರಬುದ್ಧ ಹರ್ಷ ಪ್ರಮುಖ ಆರೋಪಿಯಾಗಿದ್ದು, ಅವರ ತಂದೆ ಡಾ.ಸಿ.ಬಿ. ಮೂರ್ತಿ, ತಾಯಿ ನಳಿನಾ ಮೂರ್ತಿ ಸಹ ಆರೋಪಿ ಸ್ಥಾನದಲ್ಲಿದ್ದಾರೆ.
ಈ ಪ್ರಕರಣದಲ್ಲಿ ಡಾ.ಸಿ.ಬಿ.ಮೂರ್ತಿ ಮತ್ತು ನಳಿನಾ ಮೂರ್ತಿ ಅವರಿಗೆ ಮೈಸೂರಿನ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಆದರೆ ಪ್ರಮುಖ ಆರೋಪಿ ಪ್ರಬುದ್ಧ ಹರ್ಷ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.