ಉಡುಪಿ: ಪ್ರಜಾಪ್ರಭುತ್ವದ ಬ್ಯೂಟಿ ಅಂದ್ರೆ ಇದೆ ಅಲ್ವಾ... ಎಚ್‌ಐವಿ ಸೋಂಕಿತ ಸಂಜೀವ ವಂಡ್ಸೆ ಅವರು ತಾನು ಎಚ್‌ಐವಿ ಸೋಂಕಿತರ ಸಂಕಷ್ಟಕ್ಕೆ ಧ್ವನಿಯಾಗಬೇಕು ಎಂಬ ಪಾಸಿಟಿವ್ ನಿರ್ಧಾರದಿಂದ ಮೇ 29ರಂದು ನಡೆಯುವ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಕಳೆದ 15 ವರ್ಷಗಳಿಂದ ಎಚ್‌ಐವಿ ಸೋಂಕಿನಿಂದ ಬಳಲುತ್ತಿರುವ ಸಂಜೀವ ಅವರು, ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮ ಪಂಚಾಯತ್‌ನಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ತಾನು ಎಚ್‌ಐವಿ ಪೀಡಿತ ಎಂದು ಯಾವುದೇ ಅಳುಕಿಲ್ಲದೆ ಹೇಳಿಕೊಳ್ಳುವ ಸಂಜೀವ, ರಾಜ್ಯದಲ್ಲಿ ಸುಮಾರು 1.5 ಲಕ್ಷ ಜನ ಎಚ್‌ಐವಿ ಸೋಂಕಿನಿಂದ ಬಳಲುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲೇ ಸುಮಾರು 5 ಸಾವಿರ ಜನ ಇದ್ದಾರೆ. ಸರ್ಕಾರಿ ಅಧಿಕಾರಿಗಳು ಸೇರಿದಂತೆ ಯಾವ ಒಬ್ಬರೂ ತಮ್ಮ ಸಂಕಷ್ಟಗಳಿಗೆ ಸ್ಪಂದಿಸುವುದಿಲ್ಲ ಎಂದಿದ್ದಾರೆ.
ಎಚ್‌ಐವಿ ಸೋಂಕಿತರ ಪರವಾಗಿ ಹೋರಾಟ ನಡೆಸುತ್ತಿರುವ ಸಂಜೀವ ಅವರು, ತಮ್ಮ ಜತೆ ತಾರತಮ್ಯ ಮಾಡಬೇಡಿ, ಇತರರಂತೆ ಬದುಕುವುದಕ್ಕೆ ಬಿಡಿ ಎಂದು ಅಧಿಕಾರದಲ್ಲಿರುವವರಿಗೆ ಮನವಿ ಸಲ್ಲಿಸುತ್ತಿದ್ದಾರೆ. ಕಚೇರಿಗಳ ಬಾಗಿಲು ಬಡಿಯುತ್ತಿದ್ದಾರೆ. ಕೈ ಮುಗಿಯುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳು ತನ್ನಂಥವರ ಧ್ವನಿ ಕೇಳಿಸಿಕೊಳ್ಳುವುದಿಲ್ಲ ಎಂಬುದು ಗೊತ್ತಾದ ಮೇಲೆ ಹೋರಾಟದ ಹಾದಿ ತುಳಿದಿದ್ದಾರೆ.
ಸಂಜೀವ ಅವರು ಇದೇ ಸೋಮವಾರ ತಮ್ಮ ನಾಮಪತ್ರ ಸಲ್ಲಿಸುತ್ತಿದ್ದಾರೆ. ಶೋಷಿತರಿಗೆ ಯಾರೂ ಕರೆದು ಅಧಿಕಾರ ಕೊಡಲ್ಲ, ಆದರೆ ಪ್ರಜಾಪ್ರಭುತ್ವ ಇದಕ್ಕೊಂದು ಅವಕಾಶ ಕಲ್ಪಿಸಿದೆ. ಹೀಗಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ನನ್ನನ್ನು ಬೆಂಬಲಿಸಿ, ವಂಡ್ಸೆ ಗ್ರಾಮ ಪಂಚಾಯ್ತಿಯನ್ನು ಮಾದರಿ ಪಂಚಾಯ್ತಿಯಾಗಿ ಮಾಡುತ್ತೇನೆ ಎಂದು ಜನತೆಯಲ್ಲಿ ಕೇಳಿಕೊಂಡಿದ್ದಾರೆ.