ಜಿಲ್ಲಾ ಸುದ್ದಿ

ಮಾವು, ಹಲಸಿನ ಮೇಳ ಶುರು

ಬೆಂಗಳೂರು: ಬೆಂಗಳೂರಿಗರಿಗೆ ಮಾವು ಹಾಗೂ ಹಲಸಿನ ಹಣ್ಣುಗಳ ಸವಿ ಉಣಿಸಲು ಹಾಪ್ ಕಾಮ್ಸ್ ಸಜ್ಜಾಗಿದೆ.

ನಗರದಲ್ಲಿರುವ 250 ಕ್ಕೂ ಅಧಿಕ ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಶುಕ್ರವಾರದಿಂದ ಮಾವು ಹಾಗೂ ಹಲಸಿನ ಮೇಳ ಆರಂಭವಾಗಿದೆ. ಹನ್ನೆರಡಕ್ಕೂ ಹೆಚ್ಚಿನ ಬಗೆಯ ಮಾವಿನ ಹಣ್ಣು ಹಾಗೂ ಹಲಸಿನ ಹಣ್ಣುಗಳು ಮೇಳದಲ್ಲಿ ದೊರೆಯುತ್ತವೆ. ಈ ಬಾರಿಯ ಮೇಳದಲ್ಲಿ ಸುಮಾರು 1 ಸಾವಿರ ಮೆಟ್ರಿಕ್ ಟನ್ ಮಾವು ಹಾಗೂ 200 ಮೆಟ್ರಿಕ್ ಟನ್ ಹಲಸಿನ ಹಣ್ಣು ವ್ಯಾಪಾರ ನಡೆಸುವ ಗುರಿಯನ್ನು ಹಾಪ್ ಕಾಮ್ಸ್ ಹೊಂದಿದೆ.

ಕಳೆದ ವರ್ಷದ ಮೇಳದಲ್ಲಿ ರು.2.69 ಕೋಟಿ ಮೌಲ್ಯದ 700 ಮೆಟ್ರಿಕ್ ಟನ್ ಮಾವು ಹಾಗೂ ರು.5 ಲಕ್ಷ ಮೌಲ್ಯದ 57 ಮೆಟ್ರಿಕ್ ಟನ್ ಹಲಸು ವ್ಯಾಪಾರ ಮಾಡಲಾಗಿತ್ತು. ಈ ಬಾರಿ ಪ್ರತಿಕೂಲ ವಾತಾವರಣದಿಂದ ಮಾವು ಬೆಳೆಯಲ್ಲಿ ಕುಂಠಿತವಾಗಿದೆ ಎಂಬ ಅಂದಾಜಿದ್ದರೂ ರೈತರ ನೆರವಿನಿಂದ ಗುರಿ ಮುಟ್ಟುವುದಾಗಿ ಹಾಪ್ ಕಾಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ರೈತರ ತೋಟಗಳಿಂದ ನೇರವಾಗಿ ಮಾವು ಹಾಗೂ ಹಲಸು ಖರೀದಿಸಿ ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಮಾರವಾಗುತ್ತದೆ. ರೈತರ ಫಸಲಿಗೆ ಉತ್ತಮಧಾರಣೆ ನೀಡುವುದರ ಜತೆಗೆ ಕಾರ್ಬೈಡ್ ಮಿಶ್ರಿತ ಹಣ್ಣುಗಳು ಮಾರುಕಟ್ಟೆಗೆ ಬರದಂತೆ ಎಚ್ಚರ ವಹಿಸಲಾಗುತ್ತದೆ. ರೈತರಿಂದ ಖರೀದಿಸಿದ ಮಾವಿನ ಕಾಯಿಗಳನ್ನು ಎಥಿಲಿನ್ ಬಳಸಿ ಮಾಗಿಸಿ ಹಾಪ್ ಕಾಮ್ಸ್ ನಲ್ಲಿ ಮಾರಲಾಗುತ್ತದೆ. ಆದರೆ ಶೇ.1 ರಷ್ಟು ಮಾವನ್ನು ನೇರವಾಗಿ ಹಣ್ಣಿನ ರೂಪದಲ್ಲಿಯೇ ರೈತರಿಂದ ಖರೀದಿಸಲಾಗುತ್ತಿದೆ.

ಈ ಬಾರಿಯ ಮಾವಿನ ಮೇಳದಲ್ಲಿ ಬಾದಾಮಿ, ಸೆಂದೂರ, ರಸಪುರಿ, ಮಲಗೋವ, ಮಲ್ಲಿಕಾ ಬೈಗಾನ್ ಪಲ್ಲಿ, ಕಾಲಾಪಾಡು, ಕೇಸರ್, ನೀಲಂ, ದಶೇರಿ, ತೋತಾಪುರಿ ಹಾಗೂ ಸಕ್ಕರೆಗುತ್ತಿ ಮಾವಿನ ಹಣ್ಣು ಸಿಗುತ್ತಿದೆ. ಗ್ರಾಹಕರ ಆರೋಗ್ಯ ರಕ್ಷಿಸುವ ದೃಷ್ಟಿಯಿಂದ ಕಡ್ಡಾಯವಾಗಿ ಕಾರ್ಬೈಡ್ ರಹಿತವಾದ ಮಾವುಗಳನ್ನು ಮಾತ್ರ ಮಾರಲಾಗುತ್ತಿದೆ. ಇದಲ್ಲದೇ ಹಣ್ಣುಗಳನ್ನು ಒಯ್ಯಲು ಸಹಾಯವಾಗುವ ನಿಟ್ಟಿನಲ್ಲಿ 3 ಮತ್ತು 5 ಕೆಜಿಗಳ ಬಾಕ್ಸ್ ನಲ್ಲಿ ಮಾರಾಟ ಮಾಡಲಾಗುತ್ತಿದೆ. ಹಾಗೆಯೇ ವಿಶೇಷ ಸಂಚಾರಿ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಈ ಬಾರಿಯ ಮಾವು ಹಾಗೂ ಹಲಸಿನ ಹಣ್ಣಿನ ಋತು ಮುಗಿಯವವರೆಗೂ ಮೇಳ ಮುಂದುವರೆಯಲಿದೆ. ಜತೆಗೆ ಪ್ರತಿ ದಿನವೂ ಎಲ್ಲ ಹಣ್ಣುಗಳ ದರಪಟ್ಟಿಯನ್ನು ಮಳಿಗೆಯ ಎದುರು ಪ್ರದರ್ಶಿಸಲಾಗುತ್ತದೆ.

ಮಾವಿನ ದರ ಪಟ್ಟಿ  (ಪ್ರತಿ ಕೆಜಿಗೆ ರು.ಗಳಲ್ಲಿ)

  • ಬಾದಾಮಿ 81
  • ಸೆಂದೂರ 36
  • ರಸಪುರಿ 63
  • ಮಲಗೋವ 83
  • ಮಲ್ಲಿಕಾ 81
  • ಬೈಗಾನ್‍ಪಲ್ಲಿ 54
  • ಕಾಲಾಪಾಡು 63
  • ಕೇಸರ್ 57
  • ದಶೇರಿ 79
  • ಸಕ್ಕರೆಗುತ್ತಿ 54
SCROLL FOR NEXT