ಬೆಂಗಳೂರು: ಸಿಇಟಿಯಲ್ಲೂ ಮುಂದುವರೆದಿದ್ದು, ಭೌತಶಾಸ್ತ್ರ ಹಾಗೂ ಗಣಿತದಲ್ಲಿ ಮೂರು ಕೃಪಾಂಕ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಧರಿಸಿದೆ.
ದ್ವಿತೀಯ ಪಿಯು ಗಣಿತ ಪ್ರಶ್ನೆಪತ್ರಿಕೆಯಲ್ಲಾದ ಪ್ರಮಾದಕ್ಕೆ ಸ್ಪಷ್ಟ ಉತ್ತರ ಸಿಗುವ ಮೊದಲೇ ಸಿಇಟಿ ಪ್ರಶ್ನೆ ಪತ್ರಿಕೆಯಲ್ಲೂ ತಪ್ಪಾಗಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಭೌತಶಾಸ್ತ್ರಕ್ಕೆ 2 ಅಂಕ ಹಾಗೂ ಗಣಿತಕ್ಕೆ ಒಂದು ಕೃಪಾಂಕ ಕೊಡುವುದಾಗಿ ಪ್ರಾಧಿಕಾರ ಘೋಷಿಸಿದೆ. ಇದನ್ನು ಹೊರತುಪಡಿಸಿ ಇನ್ಯಾವುದೇ ಆಕ್ಷೇಪಣೆಗಳಿದ್ದರೂ ಮೇ 18ರ ಸಂಜೆ 5.30ರೊಳಗೆ ಪ್ರಾಧಿಕಾರಕ್ಕೆ ತಿಳಿಸಬೇಕು. ಬ್ಲೋ-ಅಪ್ ಪಠ್ಯವಸ್ತುವಿನ ಗೊಂದಲ ಹಾಗೂ ಮುದ್ರಣ ದೋಷದಿಂದ ಕೃಪಾಂಕ ಕೊಡುವ ಅನಿವಾರ್ಯ ಎದುರಾಗಿದೆ.
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳಲ್ಲಿ ಇನ್ನು ಕೆಲ ಪ್ರಶ್ನೆಗಳು ಬ್ಲೋ-ಅಪ್ ಪಠ್ಯವಸ್ತುವಿನಿಂದ ಹೊರಗಿರುವ ಬಗ್ಗೆ ವಿದ್ಯಾರ್ಥಿಗಳು ಈಗಾಗಲೇ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದಾರೆ. ಮೇ 20ರಷ್ಟೊತ್ತಿಗೆ ಕೃಪಾಂಕ ಕುರಿತ ಅಂತಿಮ ಚಿತ್ರಣ ಹೊರಬೀಳಲಿದೆ. ಪಿಯು ಗೊಂದಲ ಬಗೆಹರಿದಿಲ್ಲ ದ್ವಿತೀಯ ಪಿಯು ಪರೀಕ್ಷೆಯಲ್ಲೂ ಇದೇ ಗೊಂದಲವಾಗಿತ್ತು. ಪರಿಣಾಮವಾಗಿ ಗಣಿತದಲ್ಲಿ ಅಧಿಕೃತವಾಗಿ 9 ಅಂಕ ನೀಡಲು ಇಲಾಖೆ ನಿರ್ಧರಿಸಿತ್ತು. ಇದನ್ನು ಹೊರತುಪಡಿಸಿ ಇನ್ನು 14 ಅಂಕವನ್ನು ಮೌಲ್ಯಮಾಪನದ ಸಂದರ್ಭದಲ್ಲಿ ನೀಡಿರುವ ಬಗ್ಗೆ ಉಪನ್ಯಾಸಕರ ವಲಯದಲ್ಲಿ ಚರ್ಚೆಯಾಗುತ್ತಿದೆ.
ಮೇ 18ರ ಫಲಿತಾಂಶದ ಬಳಿಕ ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರ ಬೀಳಲಿದೆ. ಮತ್ತೊಂದೆಡೆ ತಪ್ಪಾಗಿರುವ ಪ್ರಶ್ನೆಗಳನ್ನು ನಮೂದಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಕೃಪಾಂಕ ನೀಡುವುದಾಗಿ ಇಲಾಖೆ ಹೇಳಿತ್ತು. ಆದರೆ ಅದೇ ಎಸ್ ಎಸ್‍ಎಲ್‍ಸಿಯಲ್ಲಿ ತಪ್ಪಾಗಿರುವ ಪ್ರಶ್ನೆಗಳಿಗೆ ನಮೂದಿಸದಿದ್ದರೂ ಎಲ್ಲ ವಿದ್ಯಾರ್ಥಿಗಳಿಗೆ 4 ಕೃಪಾಂಕ ನೀಡಲಾಗಿತ್ತು. ಪ್ರಶ್ನೆ ಪತ್ರಿಕೆಯಲ್ಲಿ ತಪ್ಪಾಗಿರುವುದು ಗೊತ್ತಾಗಿ ಬೇರೆ ಪ್ರಶ್ನೆ ಬರೆದಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಇಂತಹ ಕ್ರಮದಿಂದ ಅನ್ಯಾಯವಾಗುವುದಿಲ್ಲವೇ ಎಂದು ಹೈಕೋರ್ಟ್ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಕಳೆದ ವರ್ಷ ಪ್ರಕರಣವೊಂದರಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯನ್ನು ಪ್ರಶ್ನಿಸಿದ್ದರು. ಹೀಗಾಗಿ ಮೇ 18ರಂದು ಫಲಿತಾಂಶ ಪ್ರಕಟಿಸುವಾಗ ಇಲಾಖೆ ಈ ವಿಚಾರವನ್ನು ಹೇಗೆ ಪರಿಗಣಿಸುತ್ತದೆ ಎನ್ನುವುದನ್ನು ವಿದ್ಯಾರ್ಥಿಗಳು ಕಾತುರರಾಗಿದ್ದಾರೆ