ಬೆಂಗಳೂರು: ಕರ್ನಾಟಕ ಕ್ರೈಸ್ತ ಕನ್ನಡಿಗರು ಅನಾಥರಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಶನಿವಾರ ಹೇಳಿದ್ದಾರೆ.
ಕ್ರೈಸ್ತ ಧರ್ಮಾಧ್ಯಕ್ಷ ಬರ್ನಾಡ್ ಮೊರಸ್ ರಾಜ್ಯ ಎಲ್ಲಾ ಚರ್ಚ್ ಗಳಲ್ಲಿ ಆಯಾ ಭಾಷೆಗಳಲ್ಲಿ ಪ್ರಾರ್ಥನೆ ಮಾಡಿಕೊಳ್ಳಬಹುದು ಎಂಬ ಸುತ್ತೋಲೆ ಹೊರಡಿಸಿದ್ದಾರೆ. ಇದನ್ನು ಖಂಡಿಸಿ ಅಖಿಲ ಕರ್ನಾಟಕ ಕ್ಯಾಥಲಿಕ್ ಕ್ರೈಸ್ತರ ಕನ್ನಡ ಸಂಘ ಮತ್ತು ವಿವಿಧ ಕನ್ನಡ ಪರ ಸಂಘಟನೆಗಳು ಹಮ್ಮಿಕೊಂಡಿದ್ದ ಕರ್ನಾಟಕ ಕ್ರೈಸ್ತ ಭಾಷಾ ಸಮಸ್ಯೆ ಕುರಿತು ಚಿಂತನಾ ಸಭೆಯನ್ನು ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಪುಂಡಲೀಕ ಹಾಲಂಬಿ ಉದ್ಘಾಟಿಸಿದರು.
ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ರಫಾಯಲ್ ರಾಜ್ ಅವರು ಧರ್ಮಾಧ್ಯಕ್ಷರ ಈ ಸುತ್ತೋಲೆಯಿಂದ ಕ್ರೈಸ್ತ ಕನ್ನಡಿಗರು ಅನಾಥರಾಗಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಯಿಸಿರುವ ಹಾಲಂಬಿ, ಕರ್ನಾಟಕ ಕ್ರೈಸ್ತ ಕನ್ನಡಿಗರು ಅನಾಥರಲ್ಲ. ಧರ್ಮಕ್ಕಿಂತ ಭಾಷೆ ಪ್ರಧಾನವಾಗಿದ್ದು, ಭಾಷೆಗೆ ಪರಿಷತ್ ಪ್ರಾಮುಖ್ಯತೆ ನೀಡುತ್ತದೆ. ಕ್ರೈಸ್ತ ಕನ್ನಡಿಗರ ಬೆಂಬಲಕ್ಕೆ ಪರಿಷತ್ ನಿಂತಿದೆ ಎಂದು ಹೇಳಿದ್ದಾರೆ.
ಕನ್ನಡಿಗರು ಎಂದಿಗೂ ಅನಾಥರಲ್ಲ. ಕನ್ನಡ ಭಾಷೆ, ನುಡಿಗಾಗಿಯೇ ಪರಿಷತ್ ಇದೆ. ಪರಿಷತ್ ಕೇವಲ ಸಾಂಸ್ಕೃತಿಕ, ಸಾಹಿತ್ಯ ಸಂಸ್ಥೆ ಮಾತ್ರ ಅಲ್ಲ. ಭಾಷಾ ವಿಷಯಕ್ಕೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆ ಇದ್ದರು ಬೆಂಬಲಿಸುತ್ತೇವೆ. ಭಾಷಾ ವಿಷಯದಲ್ಲಿ ಕ್ರೈಸ್ತ ಕನ್ನಡಿಗರ ಪರವಾಗಿ ಪರಿಷತ್ ಹೋರಾಟ ನಡೆಸಲಿದೆ. ಕನ್ನಡ ಭಾಷೆ ಶ್ರೀಮಂತಗೊಳಿಸುವಲ್ಲಿ ಕ್ರೈಸ್ತ ಸಮುದಾಯ ಮಹತ್ತರ ಪಾತ್ರವಹಿಸಿದೆ.
ಕರ್ನಾಟಕದಲ್ಲಿರುವ ಎಲ್ಲಾ ಚರ್ಚಗಳಲ್ಲಿ ಕನ್ನಡದಲ್ಲೇ ಪ್ರಾರ್ಥನೆ ನಡೆಯಬೇಕು. ಬೇರೆ ರಾಜ್ಯಗಳಲ್ಲಿ ರಾಜ್ಯ ಭಾಷೆಯಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತಿದ್ದು, ಬೇರೆ ಭಾಷೆಗಳಿಗೆ ಅವಕಾಶ ನೀಡಿಲ್ಲ. ಹೀಗಿರಬೇಕಾದರೆ, ಕರ್ನಾಟಕದಲ್ಲಿ ಮಾತ್ರ ಏಕೆ ಬೇರೆ ಭಾಷೆಗಳಿಗೆ ಅವಕಾಶ ನೀಡಬೇಕು. ರಾಜ್ಯದ ಎಲ್ಲಾ ಚರ್ಚಗಳಲ್ಲಿ ಕನ್ನಡದಲ್ಲೇ ಪ್ರಾರ್ಥನೆ ನಡೆಯಬೇಕು. ಭಾಷೆ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ. ಕ್ರೈಸ್ತ ಧರ್ಮಾಧ್ಯಕ್ಷರು ಈ ಸುತ್ತೋಲೆಯನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರು ಮಾತನಾಡಿ, ಕೂಡಲೇ ಧರ್ಮಾಧ್ಯಕ್ಷರು ಈ ಸುತ್ತೋಲೆಯನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ವಿವಿಧ ಕನ್ನಡ ಪರ ಸಂಘನೆಗಳು, ಕ್ರೈಸ್ತ ಕನ್ನಡಿಗರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಒಗ್ಗೂಡಿ ಅಹಿಂಸಾತ್ಮಾಕ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದ್ದಾರೆ.