ಬೆಂಗಳೂರು: ನ್ಯಾಯಾಂಗಗ ಬಂಧನದಲ್ಲಿದ್ದಾಗ ಅನಾರೋಗ್ಯದಿಂದ ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಂದಂಕಿ ಲಾಟರಿ ದಂಧೆಯ ಕಿಂಗ್‍ಪಿನ್ ಪಾರಿರಾಜನ್‍ನ್ನು ಆಸ್ಪತ್ರೆಯಿಂದ ಭಾನುವಾರ ಸಂಜೆ ಡಿಸ್ಚಾರ್ಜ್ ಮಾಡಿದ್ದು, ಕೆಜಿಎಫ್ ಸಬ್‍ಜೈಲ್‍ಗೆ ಕಳುಹಿಸಲಾಗಿದೆ.
ಮೇ 16ರಂದು ರಕ್ತದೊತ್ತಡ, ಹೃದಯದ ತೊಂದರೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಭಾನುವಾರ ಮಧ್ಯಾಹ್ನವೇ ಡಿಸ್ಚಾರ್ಜ್ ಮಾಡಿದ್ದರು. ಈ ವಿಷಯ ತಿಳಿದು ಆತನನ್ನು ಕರೆದೊಯ್ಯಲು ಪೊಲೀಸ್ ವ್ಯಾನ್‍ನೊಂದಿಗೆ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಆಗಮಿಸಿದ್ದರು.
ಆದರೆ, ಹೃದ್ರೋಗ ಇರುವುದರಿಂದ ಜಯದೇವ ಆಸ್ಪತ್ರೆಗೆ ದಾಖಲಿಸಬೇಕು ಎಂದು ಶಿಫಾರಸು ಮಾಡಿದ್ದರಿಂದ ವಾಪಸ್ ತೆರಳಿದರು. ಸಂಜೆ ಸಿಪಿಐ ಜಗದೀಶ್, ಡಿಎಆರ್ ಇನ್ಸ್‍ಪೆಕ್ಟರ್ ಕೆ.ಆರ್. ರಘು, ಪಿಎಸ್‍ಐ ರಂಗಸ್ವಾಮಯ್ಯ ಆಸ್ಪತ್ರೆಗೆ ತೆರಳಿ ಜಿಲ್ಲಾ ಶಸ್ತ್ರಚಿಕಿತ್ಸಾಧಿಕಾರಿ ಡಾ. ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿ ಪಾರಿರಾಜನ್‍ನನ್ನು ಜೈಲಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಸೋಮವಾರ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆ ಇದೆ.
ಲಡ್ಡು ನೀಡಿ ಸಖ್ಯ ಬೆಳೆಸುತ್ತಿದ್ದ:
ತಮಿಳುನಾಡಿನ ಪಾರಿರಾಜನ್ ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿದ್ದ. ಮೊದಲಿನಿಂದಲೂ ಹಿರಿಯ ಐಪಿಎಸ್ ಪೊಲೀಸ್ ಅಧಿಕಾರಿಗಳ ಸಂಪರ್ಕ ಹೊಂದಿದ್ದ. ಕೆಜಿಎಫ್ ಗೆ ಅವರನ್ನು ಆಗಾಗ ಕರೆದುಕೊಂಡು ಬಂದು ತನ್ನ ಪ್ರಭಾವ ತೋರಿಸುತ್ತಿದ್ದ. ತಿರುಪತಿ ಲಡ್ಡು ನೀಡಿಯೇ ಅಧಿಕಾರಿಗಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಜಿಲ್ಲೆಯ ಯಾವುದೇ ಠಾಣೆಯಲ್ಲಿ ಆತನ ವಿರುದ್ಧ ಕೇಸ್ ದಾಖಲಾಗಿಲ್ಲ.