ಜಿಲ್ಲಾ ಸುದ್ದಿ

ಧಾರಾಕಾರವಾಗಿ ಸುರಿಯುವ ಮಳೆ, ರಸ್ತೆಗಳ ತುಂಬೆಲ್ಲಾ ನೀರು, ಸಂಚಾರಕ್ಕೆ ಅಡ್ಡಿ

Shilpa D

ಬೆಂಗಳೂರು: ನಗರದಲ್ಲಿ ಶುಕ್ರವಾರ ಸಂಜೆ ಬಿರುಗಾಳಿ ಸಹಿತ ಸುರಿದ ಮಳೆಗೆ ಹೊಸೂರು ರಸ್ತೆ ಆನೆಪಾಳ್ಯ ಬಸ್ ನಿಲ್ದಾಣದ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ಮಳೆಯಿಂದ ರಕ್ಷಣೆಗಾಗಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಒಬ್ಬ ಮೃತಪಟ್ಟು ಐವರು ಗಾಯಗೊಂಡಿದ್ದಾರೆ.
ಮೃತನ ಹೆಸರು ವಿಳಾಸ ತಿಳಿದು ಬಂದಿಲ್ಲ. ಫಕೀರಪ್ಪ, ಪ್ರವೀಣ್ ಕುಮಾರ್ ಹಾಗೂ ಪ್ರಕಾಶ್ ಡಿಸೋಜಾ ಎಂಬುವವರಿಗೆ ಗಾಯಗಳಾಗಿದ್ದು ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಐದಾರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆಯಲ್ಲಿ ನಿಲ್ಲಿಸಿದ್ದ 6 ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿವೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಉಸ್ತುವಾರಿ ಸಚಿವ  ರಾಮಲಿಂಗಾರೆಡ್ಡಿ ಮೃತರ ಕುಟುಂಬಕ್ಕೆ 1 ಲಕ್ಷ ಪರಿಹಾರ ಘೋಷಿಸಿದ್ದಾರೆ. ಗುಡುಗು ಸಹಿತ ಮಳೆ ಆರಂಭವಾಗಿದ್ದರಿಂದ 10 ಕ್ಕೂ ಅಧಿಕ ವಾಹನ ಸವಾರರು ಹಾಗೂ ಪಾದಚಾರಿಗಳು ರಕ್ಷಣೆಗಾಗಿ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಸಂಜೆ 5.30ರ ಸುಮಾರಿಗೆ ಸೇನೆಗೆ ಸೇರಿದ ಜಾಗದಲ್ಲಿ ಬೃಹತ್ ಮರ ಉರುಳಿ ಬಸ್ ನಿಲ್ದಾಣದ ಮೇಲೆ ಬಿದ್ದಿದೆ.  ಮರ ಬೀಳುವ ಮುನ್ನ ಸ್ವಲ್ಪ ಕಾಲ ಅಲುಗಾಡಿತ್ತು. ಸುರಿದ ಭಾರಿ ಮಳೆಗೆ ಕೂಡಲೇ ಮರ ಉರುಳುವುದನ್ನು ಗ್ರಹಿಸಲು ಅಲ್ಲಿ ನಿಂತಿದ್ದವರಿಗೆ ಸಾಧ್ಯವಾಗಿಲ್ಲ. ಮರದ ಬುಡ ಜೋರಾಗಿ ಸದ್ದು ಮಾಡಿ ಬೀಳುತ್ತಿರುವುದು ಅರಿವಾಗುತ್ತಿದ್ದಂತೆ ಜನರು ಓಡಲು ಆರಂಭಿಸಿದ್ದಾರೆ.ಈ ವೇಳೆ ಸುಮಾರು 40 ವಯಸ್ಸಿನ ವ್ಯಕ್ತಿ ಮರದಡಿಗೆ ಸಿಲುಕಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಉಳಿದವರೂ ಮರದ ಕೊಂಬೆಗಳ ನಡುವೆ ಸಿಲುಕಿದ್ದು ಕೂಡಲೇ ಸಾರ್ವಜನಿಕರು ನೆರವಿಗೆ ಧಾವಿಸಿದರು. ಸಣ್ಣಪುಟ್ಟ ಗಾಯಗಳಾದವರು ಆಟೋಗಳಲ್ಲಿ ತಮ್ಮ ಮನೆಗಳಿಗೆ ತೆರಳಿದರು.

ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ರಕ್ಷಣಾ ವಾಹನ, ಬಿಬಿಎಂಪಿ ಸಿಬ್ಬಂದಿ, ಸ್ಥಳೀಯ ಪೊಲೀಸರು ಆಗಮಿಸಿ ಮರ ತೆರವು ಕಾರ್ಯಾಚರಣೆ ನಡೆಸಿದರು. ಆದರೆ ಮರದ ಬುಡ ಭಾರಿ ಗಾತ್ರದ್ದಾಗಿದ್ದರಿಂದ ತೆರವು ಕಾರ್ಯಾಚರಣೆ ಸವಾಲಿನದ್ದಾಗಿತ್ತು. ಈ ವೇಳೆ ಎರಡು ಜೆಸಿಬಿಗಳನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಯಿತು. ಅಗ್ನಿ ಶಾಮಕ ಸಿಬ್ಬಂದಿ ಮರದ ಬುಡ ಹಾಗೂ ಕೊಂಬೆಗಳನ್ನು ತೆರವುಗೊಳಿಸಿದರು. ಒಂದು ತಾಸಿನ ಬಳಿಕವಷ್ಟೇ ಶವವನ್ನು ಹೊರ ತೆಗೆಯಲು ಸಾಧ್ಯವಾಯಿತು.

ಗಾಯಗೊಂಡವರು: ಸೇಂಟ್ ಜಾನ್ಸ್ ಹಾಗೂ ಸೇಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು, ಫಕೀರಪ್ಪ, ಕುಡ್ಲುಗೇಟ್, ಪ್ರಕಾಶ್ ಡಿಸೋಜಾ, ಎಲೆಕ್ಟ್ರಾನಿಕ್ ಸಿಟಿ, ಪ್ರವೀಣ್ ಕುಮಾರ್, ಬೇಗೂರು, ಶರತ್ ತಿಪ್ಪಸಂದ್ರ, ಶೀಲಾ ಜಾಯ್, ಕೋರಮಂಗಲ.

SCROLL FOR NEXT