ಜಿಲ್ಲಾ ಸುದ್ದಿ

ಜಾತಿ, ಧರ್ಮ ಹೆಸರಲ್ಲಿ ಒಡಕು: ಚಂಪಾ

Srinivasamurthy VN

ಬೆಂಗಳೂರು: ಇಂದು ಜಾತಿ, ಮತ, ಧರ್ಮದ ಹೆಸರಿನಲ್ಲಿ ಸಮಾಜದೊಳಗೆ ಒಡಕು ಮೂಡಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಈ ಬಗ್ಗೆ ಜನ ಜಾಗೃತರಾಗಬೇಕೆಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಹೇಳಿದರು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾನುವಾರ ಡಿಎಸ್ -ಮ್ಯಾಕ್ಸ್ ಸಂಸ್ಥೆ ಕೊಡಮಾಡಿದ `ಡಿಎಸ್-ಮ್ಯಾಕ್ಸ್ ಸಾಹಿತ್ಯ ಪುರಸ್ಕಾರ' ಸ್ವೀಕರಿಸಿ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ  ದೇಶದಲ್ಲಿ ಆತಂಕಕರ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಖ್ಯಾತ ಸಂಶೋಧಕ ಡಾ.ಎಂ. ಎಂ.ಕಲಬುರ್ಗಿ ಅವರು ವಿಷಮ ವಾತಾವರಣದ ತಿರುವಿಗೆ ಸಿಲುಕಿ ಕೊಲೆಯಾದರು. ಇಂತಹ  ವಿದ್ಯಮಾನಗಳು ದೇಶದಲ್ಲಿ ವೈಚಾರಿಕ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆ ತರುತ್ತಿವೆ. ಜಾತಿ, ಧರ್ಮ, ಮತದ ಹೆಸರಿನಲ್ಲಿ ಸಮಾಜ ಒಡೆಯುವ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿವೆ. ಈ ಬಗ್ಗೆ  ಜನಸಾಮಾನ್ಯರು ಜಾಗೃತರಾಗಬೇಕಿದ್ದು, ಇಂತಹ ಶಕ್ತಿಗಳ ವಿರುದ್ಧ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.

ಐಟಿ-ಬಿಟಿ ಕ್ಷೇತ್ರದಲ್ಲಿ ರಾಜಧಾನಿ ಬೆಂಗಳೂರಿಗೆ ಮಹತ್ವದ ಸ್ಥಾನವಿದೆ. ಕನ್ನಡ ತಾಯಿಗೆ ಯಾವುದೇ ಜಾತಿ, ಧರ್ಮ, ಮತದ ತಾರತಮ್ಯವಿಲ್ಲ. ಆಂಧ್ರ ಮೂಲದ ಡಿಎಸ್-ಮ್ಯಾಕ್ಸ್ ಸಂಸ್ಥೆ ತನ್ನ ಕೆಲಸದೊಂದಿಗೆ ಕನ್ನಡದ ಕೆಲಸವನ್ನೂ ಮಾಡುತ್ತಿರುವುದು ಶ್ಲಾಘನೀಯ ಎಂದರು. `ಡಿಎಸ್-ಮ್ಯಾಕ್ಸ್ ಸಾಹಿತ್ಯ ಪುರಸ್ಕಾರ' ಸ್ವೀಕರಿಸಿದ ಕವಿ ಡಾ. ಕೆ.ಎಸ್. ನಿಸಾರ ಅಹಮ್ಮದ್  ಮಾತನಾಡಿದರು. ಇದೇ ವೇಳೆ ಸಾಹಿತಿಗಳಾದ ಬಿ. ಆರ್. ಲಕ್ಷ್ಮಣರಾವ್, ಡಾ. ರಾಜೇಂದ್ರ ಚೆನ್ನಿ, ಡಾ.ಆಶಾ ಬೆನಕಪ್ಪ, ಪೂರ್ಣಿಮಾ ಸುರೇಶ್, ಚಂದ್ರಶೇಖರ ತಾಳ್ಯ, ಟಿ.ಎಸ್. ವಿವೇಕಾನಂದ  ಅವರಿಗೆ `ಡಿಎಸ್ -ಮ್ಯಾಕ್ಸ್ ಸಾಹಿತ್ಯ ಶ್ರೀ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಪಿ. ದಯಾನಂದ ಮತ್ತಿತರರು ಉಪಸ್ಥಿತರಿದ್ದರು.

SCROLL FOR NEXT