ಅಕ್ಕೈ ಪದ್ಮಶಾಲಿ (ಕೃಪೆ: ಫೇಸ್ಬುಕ್ )
ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ 30 ಹರೆಯದ ಸಾಮಾಜಿಕ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ ಅವರು ತಮ್ಮ ಪ್ರಶಸ್ತಿಯನ್ನು ನಾಗರಿಕ ಚಳುವಳಿಗೆ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಮಂಗಳಮುಖಿ, ಅಕ್ಕೈ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ .
ಸಾಮಾನ್ಯ ಮಧ್ಯವರ್ಗ ಕುಟಂಬದಲ್ಲಿ ಗಂಡಾಗಿ ಜನಿಸಿದ ಅಕ್ಕೈ, ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲೇ. ನಾನು ಅಪ್ಪ ಅಮ್ಮ ಮತ್ತು ಅಕ್ಕ ಮತ್ತು ತಮ್ಮನೊಡಗೂಡಿದ ಕುಟುಂಬವಾಗಿತ್ತು ನಮ್ಮದು. ನಾನು ಬೆಳೆಯುತ್ತಾ ಬಂದಂತೆ ಜನರು ನನ್ನಲ್ಲಿರುವ ಹೆಣ್ಣಿನ ಭಾವಗಳನ್ನು ನೋಡಿ ನಗೆಯಾಡುತ್ತಿದ್ದರು. ಇದರಿಂದ ಮನಸ್ಸಿಗೆ ಆಘಾತವಾಗಿತ್ತು, ಹಾಗೆ ನಾನು 10ನೇ ತರಗತಿಯಲ್ಲಿ ಅನುತ್ತೀರ್ಣಳಾದೆ. ಆಮೇಲೆ ಪುಟ್ಟ ಪುಟ್ಟ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಿಕೊಂಡೆ. ಸಿರಾಮಿಕ್ ಅಂಗಡಿಯಲ್ಲಿ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದೂ ಇದೆ. ನನ್ನನ್ನು ನೋಡಿದಾಗಲೆಲ್ಲಾ ಜನರು ನನ್ನನ್ನು ತಮಾಷೆ ಮಾಡುತ್ತಿದ್ದರು. ಕೆಲವೊಬ್ಬರು ನನ್ನ ಮೇಲೆ ಲೈಂಗಿಕ ದೌರ್ಜನ್ಯವನ್ನೂ ಮಾಡಿದರು. ಆ ಕಷ್ಟಗಳಿಂದ ಹೊರ ಬರುವುದಕ್ಕಾಗಿ ನಾನು ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದೆ.
ನನಗಾಗ 16 ವರುಷ. ಕಾರ್ಪರೇಷನ್ ಸರ್ಕಲ್ ನಲ್ಲಿ ನಾನಗೊಬ್ಬಳು ಮಂಗಳಮುಖಿ ಪರಿಚಯವಾದಳು. ಅದು ನನ್ನ ಜೀವನದ ಟರ್ನಿಂಗ್ ಪಾಯಿಂಟ್ ಆಗಿತ್ತು. ನನ್ನನ್ನು ಬೇರೆ ಎಂಬಂತೆ ನೋಡದೆ, ನನ್ನಂತೆಯೇ ಇರುವವರು ಸಿಕ್ಕಿದಾಗ ನನಗೆ ಖುಷಿಯಾಗಿತ್ತು. ಆಮೇಲೆ ನಾನು ಅಂದರೆ 17 ನೇ ವಯಸ್ಸಿನಲ್ಲಿ ಹೆಣ್ಣಾಹಿ ಪರಿವರ್ತನೆಗೊಂಡೆ. ಹೋಸೂರು ರಸ್ತೆ, ಕಬ್ಬನ್ ಪಾರ್ಕ್‌ನಲ್ಲಿ ಭಿಕ್ಷೆ ಬೇಡಿದೆ, ಲೈಂಗಿಕ ಕಾರ್ಯಕರ್ತೆಯಾಗಿ ದುಡಿದೆ. ಅದೊಂದು ದಿನ, ನನಗೆ ಆಗ 20 ವರ್ಷ. ಈ ಕೆಲಸವನ್ನೆಲ್ಲಾ ನಿಲ್ಲಿಸಬೇಕೆಂದು ತೀರ್ಮಾನಿಸಿದೆ. ಸಮಾಜದಲ್ಲಿ ಗೌರವದಿಂದ ಬಾಳಬೇಕೆಂದು ಬಯಸಿದೆ. ಹಾಗೆ 2004ರಲ್ಲಿ ನಾನು ಸಂಗಮ (ಲೈಂಗಿಕ ಅಲ್ಪಸಂಖ್ಯಾತ ಕಲ್ಯಾಣಕ್ಕಾಗಿ ಕೆಲಸ ಮಾಡುವ ಸಂಸ್ಥೆ)ಕ್ಕೆ ಸೇರಿಕೊಂಡೆ.
ಇಲ್ಲಿ ಸೇರಿದ ಮೇಲೆ ನನಗೆ ನ್ಯಾಯಾಂಗ, ಮಾಧ್ಯಮ ಮತ್ತು ರಾಜಕೀಯದಲ್ಲಿ ಇರುವ ವಿವಿಧ ಜನರನ್ನು ಪರಿಚಯವಾಯಿತು. ಅವರಲ್ಲಿ ನಾನು ಮಂಗಳಮುಖಿಯರ ಕಷ್ಟಗಳನ್ನು ಹೇಳಿದೆ. ಇಂಥಾ ಜನರಿಗೆ ನಮ್ಮ ಕಷ್ಟಗಳನ್ನು ಮನವರಿಕೆ ಮಾಡಿಕೊಟ್ಟಾಗಲೇ ನಮ್ಮ ಧ್ವನಿ ತಲುಪಬೇಕಾದ ಸ್ಥಳಕ್ಕೆ ತಲುಪುತ್ತದೆ. ಸಾರ್ವಜನಿಕರೂ ನಮ್ಮ ದನಿಯನ್ನು ಕೇಳಿಸಿಕೊಂಡರು.
2013ರಲ್ಲಿ ನಾನು ಸಂಗಮವನ್ನು ಬಿಟ್ಟು ಸಮಾನಮನಸ್ಕರೊಂಗಿಗೆ ಒಂದೆಡೆ ಎಂಬ ಸಂಸ್ಥೆಯನ್ನು ಸ್ಥಾಪಿಸಿದೆ.
15 ವರುಷಗಳ ಹಿಂದೆ ನಮ್ಮ ಮೇಲೆ ಸಮಾಜ ದೌರ್ಜನ್ಯವೆಸಗುತ್ತಿತ್ತು. ಆದರೆ ಈಗ ನಮ್ಮಂತವರು ಸಂಜೆ ಕಾಲೇಜಿಗೆ ಹೋಗುತ್ತಿದ್ದಾರೆ, ಒಳ್ಳೆ ಕಡೆ ಕೆಲಸ ಮಾಡುತ್ತಿದ್ದಾರೆ. ಈ ಬದಲಾವಣೆಗಳು ಒಂದೋ ಎರಡು ದಿನದಲ್ಲಿ ಆಗಿರುವುದಲ್ಲ. ಆ ಜಗತ್ತು ಮಂಗಳಮುಖಿಯರನ್ನು ಬೇರೆಯವರಂತೆ ನೋಡದೆ ಮನುಷ್ಯರಂತೆ ಕಾಣಬೇಕಾಗಿದೆ. ಅದೇ ನನ್ನ ಆಸೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos