ಜಿಲ್ಲಾ ಸುದ್ದಿ

ಸಾಹಿತಿಗಳ ಜತೆ ಚರ್ಚೆಗೆ ಪರಮೇಶ್ವರ್ ನಿರ್ಧಾರ

Sumana Upadhyaya

ಬೆಂಗಳೂರು: ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಮತ್ತು ಪ್ರಶಸ್ತಿ ವಾಪಸ್ ಆಂದೋಲನ ಹಿನ್ನೆಲೆಯಲ್ಲಿ ನಾಡಿನ ಸಾಹಿತಿಗಳು ಹಾಗೂ ಪೊಲೀಸ್ ಅಧಿಕಾರಿಗಳ ಜತೆ ಪ್ರತ್ಯೇಕ ಸಭೆ ಕರೆಯಲು ನಿರ್ಧರಿಸಿರುವುದಾಗಿ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಅವರು ಸಂಗ್ರಹಿಸಿರುವ `2014ನೇ ಲೋಕಸಭಾ ಚುನಾವಣೆ- ಬಿಜೆಪಿ ಕೊಟ್ಟ ಭಾಷೆಯೇನು ? ನಂತರ ಸಮರ್ಥಿಸಿದ್ದೇನು ?' ಎಂಬ ಕಿರುಹೊತ್ತಿಗೆಯನ್ನು ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಬಿಡುಗಡೆಗೊಳಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಲಬುರ್ಗಿ ಹಂತಕರ ಪತ್ತೆಗೆ ರಾಜ್ಯ ಸರ್ಕಾರ ಈಗಾಗಲೇ ಸಿಐಡಿ ತನಿಖೆಗೆ ಆದೇಶಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಆ ಬಗ್ಗೆ ಸ್ಪಷ್ಟ ಮಾಹಿತಿಯೊಂದಿಗೆ ನಾನು ನಿಮ್ಮ ಬಳಿ ಬರುತ್ತೇನೆ ಎಂದು ಹೇಳಿದರು.

``ಕಲಬುರ್ಗಿ ಹತ್ಯೆ ಬಳಿಕ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಾಗುತ್ತಿರುವ ಹಲ್ಲೆಯನ್ನು ಖಂಡಿಸಿ ಸಾಹಿತಿಗಳು ತಮಗೆ ನೀಡಿದ ಪ್ರಶಸ್ತಿಯನ್ನು ವಾಪಾಸ್ ಕೊಡುತ್ತಿದ್ದಾರೆ. ತನಿಖೆ ಯಾವ ಹಂತದಲ್ಲಿದೆ ? ಯಾವ ರೀತಿ ಚುರುಕು ನೀಡಬೇಕೆಂಬ ಬಗ್ಗೆ ಚರ್ಚಿಸಲು ಸದ್ಯದಲ್ಲೇ ನಾನು ಪೊಲೀಸ್ ಅಧಿಕಾರಿಗಳ ಸಭೆ ಕರೆಯುತ್ತೇನೆ. ಅದೇ ರೀತಿ ಸಾಹಿತಿಗಳ ಜತೆಯೂ ಚರ್ಚೆ ನಡೆಸುವುದಕ್ಕೆ ಪ್ರತ್ಯೇಕ ಸಭೆ ಕರೆಯಲು ನಿರ್ಧರಿಸಿದ್ದೇನೆ'' ಎಂದರು.

ಜಲಿಯನ್ ವಾಲಾಭಾಗ್ ಹತ್ಯಾಕಾಂಡ ನಡೆದಾಗ ಆ ಘಟನೆ ಇಡೀ ಭಾರತೀಯರ ಭಾವನೆಯನ್ನು ಕೆರಳಿಸಿತ್ತು. ಆ ಸಂದರ್ಭದಲ್ಲಿ ಕವಿ ರವೀಂದ್ರನಾಥ್ ಠ್ಯಾಗೋರ್ ಅವರಿಗೆ ನೈಟ್‍ಹುಡ್ ಪ್ರಶಸ್ತಿ ಬಂದಿತ್ತು. ಆಗ ಅವರು ಅದನ್ನು ಬ್ರಿಟಿಷ್ ಸರ್ಕಾರಕ್ಕೆ ವಾಪಾಸ್ ಮಾಡಿದ್ದರು. ಕಲಬುರ್ಗಿ ವಿಚಾರದಲ್ಲೂ ಇದೇ ರೀತಿ ಆಗುತ್ತಿದೆ. ಅದನ್ನು ತಪ್ಪು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

SCROLL FOR NEXT