ಬೆಂಗಳೂರು:ದೊಡ್ಡಬಳ್ಳಾಪುರ ಟೌನ್ ಎಸ್.ಐ ಜಗದೀಶ್ ಕೊಲೆ ಪ್ರಕರಣ ಸಂಬಂಧ ಬಂಧಿತನಾಗಿರುವ ಆರೋಪಿ ಹರೀಶ್ ಬಾಬು, ವಿದ್ಯಾರಣ್ಯಪುರ ಪೊಲೀಸ್ ಇನ್ಸ್ ಪೆಕ್ಟರ್ ಪುನೀತ್ ಹಾಗೂ ಠಾಣೆ ಸಿಬ್ಬಂದಿಯನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ.
ಜಗದೀಶ್ ಕೊಲೆ ಪ್ರಕರಣ ಸಂಬಂಧ ವಿಚಾರಣೆಗಾಗಿ 14 ದಿನಗಳ ಕಾಲ ಆರೋಪಿಗಳಾದ ಹರೀಶ್ ಬಾಬು ಹಾಗೂ ಮಧುನನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಪ್ರಕರಣದ ಮಾಹಿತಿ ಸಂಗ್ರಹಿಸಿದ್ದಾರೆ. ವಿಚಾರಣೆ ವೇಳೆ ವಿದ್ಯಾರಣ್ಯಪುರ ಇನ್ಸ್ ಪೆಕ್ಟರ್ ಪುನೀತ್ ಹಾಗೂ ಸಿಬ್ಬಂದಿಯನ್ನು ತಾನು ಜೈಲಿನಿಂದ ಬಿಡುಗಡೆಯಾಗಿ ಹೊರ ಬಂದು ಕೊಲೆ ಮಾಡುವುದಾಗಿ ಹರೀಶ್ ಬಾಬು ಬೆದರಿಕೆ ಹಾಕಿದ್ದಾನೆಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದರು.
40 ಕ್ಕೂ ಅಧಿಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹರೀಶ್ ನನ್ನು ಮೇ ತಿಂಗಳಲ್ಲಿ ವಿದ್ಯಾರಣ್ಯಪುರ ಪೊಲೀಸರು ಅಂಚೆಪಾಳ್ಯದಲ್ಲಿ ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು. ಸಹಚರ ಮಧುವಿನ ತಾಯಿ ತಿಮ್ಮಕ್ಕ ಠಾಣೆ ಬಳಿ ಬಂದು ನನ್ನನ್ನು ಬಿಡುಗಡೆ ಮಾಡಿ ಎಂದು ಗಲಾಟೆ ಮಾಡುತ್ತಿದ್ದಳು. ಈ ವೇಳೆ ಪೊಲೀಸರು, ಆಕೆಯನ್ನು ಠಾಣೆಯೊಳಗೆ ಕೂಡಿಟ್ಟು ವೇಶ್ಯೆಯಂತೆ ನಡೆಸಿಕೊಂಡಿದ್ದರು. ಹೀಗಾಗಿ ತಿಮ್ಮಕ್ಕಳಿಗೆ ಅವಮಾನ ಮಾಡಿರುವ ವಿದ್ಯಾರಣ್ಯಪುರ ಪೊಲೀಸರ ಮೇಲೆ ನನಗೆ ಆಕ್ರೋಶವಿದ್ದು ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ವಿಚಾರಣೆ ವೇಳೆ ಅವಾಜ್ ಹಾಕಿದ್ದಾನೆಂದು ಅಧಿಕಾರಿ ಹೇಳಿದ್ದಾರೆ. ಜಗದೀಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.