ಜಿಲ್ಲಾ ಸುದ್ದಿ

ಅಸಹಿಷ್ಣುತೆಯಿಂದ ಹೂಡಿಕೆಗೆ ಹಿಂಜರಿಕೆ: ಗೃಹ ಸಚಿವ ಪರಮೇಶ್ವರ್

Srinivas Rao BV

ಬೆಂಗಳೂರು: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಂಡವಾಳ ಹೂಡಿಕೆಗೆ ವಿದೇಶಿ ಉದ್ಯಮಿಗಳು ಅಂಜುವಂಥ ಸ್ಥಿತಿ  ನಿರ್ಮಾಣವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅಭಿಪ್ರಾಯಪಟ್ಟಿದ್ದಾರೆ.
ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಜರ್ಮನ್ ಕೈಗಾರಿಕಾ ನಿಯೋಗದ ಜತೆಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಅಸಹಿಷ್ಣುತೆ ಬಗ್ಗೆ ವಿದೇಶಿ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ತಮ್ಮನ್ನು ಭೇಟಿ ಮಾಡಿದ ಜರ್ಮನ್ ನಿಯೋಗ ಕೂಡಾ ಈ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಆದರೆ ರಾಜ್ಯದಲ್ಲಿ ಅಂಥ ಸನ್ನಿವೇಶ ಇಲ್ಲ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ ಎಂದು ಹೇಳಿದರು. ಕೆಲ ಧಾರ್ಮಿಕ ಸಂಸ್ಥೆಗಳು ದೇಶದಲ್ಲಿ ಅಸಹಿಷ್ಣುತೆ ಬಿತ್ತುವ ಪ್ರಯತ್ನ ನಡೆಸುತ್ತಿವೆ. ಆದರೆ ದೇಶದ ಆಂತರಿಕ ವಿಚಾರಗಳೆಲ್ಲದರ ಬಗ್ಗೆ ಅವರ ಜತೆ ಚರ್ಚೆ ನಡೆಸುವುದಕ್ಕೆ ಸಾಧ್ಯವಿಲ್ಲ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಿ. ಅದಕ್ಕೆ ಅಗತ್ಯವಾದ ಎಲ್ಲ ನೆರವುಗಳನ್ನು ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದೇನೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಶೇ.20ರಷ್ಟು ಸಿಬ್ಬಂದಿ ಕೊರತೆ ಇದೆ. 8000 ಹುದ್ದೆ ಭರ್ತಿಗೆ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರತಿ ವರ್ಷ 3ರಿಂದ 4 ಸಾವಿರ ಸಿಬ್ಬಂದಿ ಸೇವೆಯಿಂದ ನಿವೃತ್ತರಾಗುತ್ತಾರೆ. ಕಾಲಕಾಲಕ್ಕೆ ಉದ್ಯೋಗ ಭರ್ತಿ ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

SCROLL FOR NEXT