ಜಿಲ್ಲಾ ಸುದ್ದಿ

ವಿವಾದದತ್ತ ಸಿಂಹಾಸನ ಪರದೆ: ಸಿಂಹಾಸನಕ್ಕೆ ಹೊದಿಸಿದ್ದ ಪರದೆ ಸರಿಸುವ ಅಧಿಕಾರಿಗಳ ಯತ್ನ

Mainashree
ಮೈಸೂರು: ದಸರಾ ಮಹೋತ್ಸವ ಅಂಗವಾಗಿ ರಾಜವಂಶಸ್ಥರು ಮೈಸೂರು ಅರ ಮನೆಯಲ್ಲಿ ನಡೆಸುವ ಖಾಸಗಿ ದರ್ಬಾರ್‍ನ ಸಿಂಹಾಸನಕ್ಕೆ ರಾಜ ವಂಶಸ್ಥರು ಹೊದಿಸಿದ್ದ ಪರದೆಯನ್ನು ಸರಿಸಲು ಅಧಿಕಾರಿಗಳು ಗುರುವಾರ ನಡೆಸಿದ ಯತ್ನವು ವಿಫಲವಾಗಿದೆ. 
ಇದು ಈಗ ವಿವಾದ ಸ್ವರೂಪ ಪಡೆದುಕೊಂಡಿದೆ. ಮೈಸೂರು ಅರಮನೆ ಮಂಡಳಿ ನಿರ್ದೇಶಕಿ ಬಿ.ಜಿ. ಇಂದಿರಮ್ಮ, ಅರಮನೆ ಎಸಿಪಿ ಚೆನ್ನಯ್ಯ ಅವರು ಸಿಂಹಾಸನಕ್ಕೆ ಹೊದಿಸಿದ್ದ ಪರದೆ ಯನ್ನು ತೆಗೆದು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲು ಯತ್ನಿಸಿದರು. 
ಆದರೆ, ರಾಜ ವಂಶಸ್ಥರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳ ಯತ್ನ ಸಫಲವಾಗಿಲ್ಲ. ಅರಮನೆಯ ದರ್ಬಾರ್ ಹಾಲ್ ನಲ್ಲಿ ಸ್ವರ್ಣ ಸಿಂಹಾಸನವನ್ನು ವೀಕ್ಷಣೆಗೆ ರಾಜವಂಶಸ್ಥರು ನಿರ್ಬಂಧಿಸಿ ಪರದೆ ಕಟ್ಟಿಸಿದ್ದಾರೆ. 
ಅರಮನೆಗೆ ಬರುವ ಪ್ರವಾಸಿಗರು ಸಿಂಹಾಸನ ವೀಕ್ಷಣೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಇಂದಿರಮ್ಮ, ಚೆನ್ನಯ್ಯ ಅವರು ಪರದೆ ತೆರವುಗೊಳಿಸಲು ಮುಂದಾಗಿದ್ದರು. ಆದರೆ, ರಾಜವಂಶಸ್ಥರ ಭದ್ರತಾ ಸಿಬ್ಬಂದಿ ಅವಕಾಶ ನೀಡಿಲ್ಲ. 
ಈ ವಿಚಾರ ತಿಳಿದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಅಧಿಕಾರಿಗಳ ವರ್ತನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಹಿರಿಯ ಅಧಿಕಾರಿಗಳಿಗೆ ಮೌಖಿಕವಾಗಿ ದೂರಿದ್ದಾರೆ ಎಂದು ತಿಳಿದು ಬಂದಿದೆ. ದಸರಾ ಖಾಸಗಿ ದರ್ಬಾರ್‍ಗೆ ಜೋಡಿಸಲಾಗಿರುವ ರತ್ನಖಚಿತ ಸಿಂಹಾಸವನವನ್ನು ನ.6 ರಂದು ಬಿಚ್ಚುವ ಮೂಲಕ ಸ್ಥಾನಕ್ಕೆ ಇರಿಸಲಾಗುತ್ತದೆ.
SCROLL FOR NEXT