ಬೆಂಗಳೂರು: ಎಂಎಸ್‍ಜಿಪಿ ಹಾಗೂ ಟೆರ್ರಾಫಾರ್ಮ ಕಸ ಘಟಕಗಳಿಗೆ ಬೀಗ ಬಿದ್ದಿರುವುದರಿಂದ ನಗರದೊಳಗಿನ ಕಸ ವಿಲೇವಾರಿ ಸವಾಲಾಗಿದೆ. ಹೀಗಾಗಿ ಎಲ್ಲ ಬಿಬಿಎಂಪಿ ವಲಯಗಳು ಈಗ ಮಾವಳ್ಳಿಪುರ ಕಸ ಘಟಕವನ್ನೇ ಅವಲಂಬಿಸಿವೆ.
ಪಶ್ಚಿಮ, ಪೂರ್ವ ಹಾಗೂ ಮಹದೇವಪುರ ವಲಯಗಳಿಂದ 10 ಟನ್ ಸಾಮಥ್ರ್ಯದ 156 ಲಾರಿಗಳಲ್ಲಿ ಕಸ ಸಾಗಿಸಲಾಗುತ್ತಿದೆ. ಎರಡೂ ಘಟಕಗಳಲ್ಲಿ ಕಸ ಸಾಗಿಸಲು ಸಾಧ್ಯವಾಗಿರುವದರಿಂದ ಮೂರು ವಲಯಗಳಿಂದ ಸಣ್ಣ ಪ್ರಮಾಣದ ಕಸವನ್ನು ಮಾವಳ್ಳಿಪುರ ಘಟಕಕ್ಕೆ ಸಾಗಿಸಲಾಗುತ್ತಿದೆ. ಉಳಿದ ಕಸವನ್ನು ರೈತರಿಗೆ ಗೊಬ್ಬರಕ್ಕಾಗಿ ನೀಡಲಾಗುತ್ತಿದೆ. ಆದರೂ ಕಸ ವಿಲೇವಾರಿ ಸಾಧ್ಯವಾಗುತ್ತಿಲ್ಲ.
ಹೀಗಾಗಿ ವಲಯದಲ್ಲೇ ಇರುವ ಒಣತ್ಯಾಜ್ಯ ಸಂಗ್ರಹಣಾ ಘಟಕಗಳಿಗೆ ಮೊರೆ ಹೋಗಲಾಗಿದೆ. ಪೂರ್ವ ವಲಯದ 710 ಟನ್, ಪಶ್ಚಿಮದ 650 ಹಾಗೂ ಮಹದೇವಪುರ ವಲಯದ 300 ಟನ್ ಕಸ ಎಂಎಸ್‍ಜಿಪಿ ಹಾಗೂ ಟೆರ್ರಾಫಾರ್ಮ ಘಟಕಕ್ಕೆ ನಿತ್ಯ ವಿಲೇವಾರಿಯಾಗುತ್ತಿತ್ತು. ಒಂದೇ ಕಡೆ ಕಳುಹಿಸುತ್ತಿದ್ದ ಕಸದ ವಿಲೇವಾರಿಗೆ ತಾತ್ಕಾಲಿಕ ಮಾರ್ಗಗಳನ್ನು ಕಂಡುಕೊಳ್ಳಲಾಗಿದೆ.
ಪರ್ಯಾಯ ಕ್ರಮಕ್ಕೆ ಮೊರೆ: ಸ್ಥಗಿತಗೊಂಡಿರುವ 2 ಘಟಕಗಳಿಗೆ ವಾರದಿಂದ 3 ವಲಯಗಳ ಅಧಿಕಾರಿಗಳು ಭೇಟಿ ನೀಡುತ್ತಿದ್ದು, ಜನರ ಮನವೊಲಿಸಲು ಯತ್ನಿಸುತ್ತಿದ್ದಾರೆ. ಆದರೆ, ಸದ್ಯಕ್ಕೆ ಇದು ಪರಿಹಾರವಾಗುವಂತೆ ತೋರುತ್ತಿಲ್ಲ. ಹೀಗಾಗಿ ರೈತರಿಗೆ ಗೊಬ್ಬರ ರೂಪದಲ್ಲಿ ನೀಡುವ, ಒಣತ್ಯಾಜ್ಯ ಸಂಗ್ರಹಣಾ ಘಟಕಗಳಿಗೆ ನೀಡುವ ಹಾಗೂ ಪರ್ಯಾಯ ಕಸ ಘಟಕಗಳಿಗೆ ಕಳುಹಿಸುವ ಮೂಲಕ ಪರಿಹಾರ ಕಂಡುಕೊಳ್ಳಲಾಗಿದೆ. ಆದರೆ ಮೂರು ವಲಯಗಳಲ್ಲಿ ರಸ್ತೆ ಬದಿ, ಪಾದಚಾರಿ ಮಾರ್ಗಗಳಲ್ಲಿ ಕಸ ರಾಶಿ ಬಿದ್ದಿರುವುದು ಕಂಡುಬರುತ್ತಿದೆ.
ಪಶ್ಚಿಮ ವಲಯದ ಅಧಿಕಾರಿಗಳು ಇಂತಹ ಸ್ಥಳಗಳನ್ನು (ಬ್ಲ್ಯಾಕ್ ಸ್ಪಾಟ್) ಈಗಾಗಲೇ ಗುರುತಿಸಿದ್ದಾರೆ. ಮಹದೇವಪುರ ವಲಯದಲ್ಲಿ 12, ಪಶ್ಚಿಮದಲ್ಲಿ 44 ಒಣತ್ಯಾಜ್ಯ ಸಂಗ್ರಹಣಾ ಘಟಕಗಳಿವೆ. ಪೂರ್ವ ವಲಯದಲ್ಲಿ ಕೆಲವು ವಿಭಾಗಗಳನ್ನು ಮಾಡಿಕೊಂಡಿದ್ದು, ಇಲ್ಲಿಯೂ 20-25 ಒಣತ್ಯಾಜ್ಯ ಸಂಗ್ರಹಣಾ ಘಟಕಗಳಿಗೆ ಕಸ ಕಳುಹಿಸಲಾಗುತ್ತಿದೆ. ಹಸಿ ಕಸವನ್ನು ಬಯೋಮಿಥೇನೈಸೇಶನ್ ಘಟಕ, ಹೋಟೆಲ್ ಕಸ ಸಂಗ್ರಹವಾಗುವ ಘಟಕಗಳಿಗೆ ವಿಲೇವಾರಿ ಮಾಡಲಾಗುತ್ತಿದೆ. ಕೆಲವು ವಲಯಗಳಲ್ಲಿ ಖಾಲಿ ನಿವೇಶನವಿರುವ ಜಾಗಗಳಲ್ಲಿ ಕಸ ಸುರಿದು ಪೌರಕಾರ್ಮಿಕರ ಸಹಕಾರದಿಂದ ವಿಂಗಡಣೆ ಮಾಡಿ, ಹಸಿ ಕಸವನ್ನು ಮಾತ್ರ ವಿಲೇವಾರಿ ಮಾಡಲಾಗುತ್ತಿದೆ. ಇಂತಹ ಪ್ರದೇಶಗಳಿಗೆ ರೈತರನ್ನು ಆಹ್ವಾನಿಸಿ ಗೊಬ್ಬರಕ್ಕಾಗಿ ಬಳಸಿಕೊಳ್ಳುವಂತೆ ಮನವಿ ಮಾಡಲಾಗುತ್ತಿದೆ.
ಪರಿಹಾರಕ್ಕೆ ರಮೇಶ್ ಶಿಫಾರಸು
ಕಸ ಘಟಕಗಳು ವೈಜ್ಞಾನಿಕವಾಗಿ ಕಾರ್ಯನಿರ್ವಹಿಸಲು ಕಾನೂನಿನಲ್ಲಿ ತಿದ್ದುಪಡಿ ತಂದು ನಾಗರಿಕ ಸಮಿತಿ ರಚಿಸಬೇಕು ಎಂದು ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪಿ.ಆರ್. ರಮೇಶ್ ಸಲಹೆ ನೀಡಿದ್ದಾರೆ.
1 ನಾಗರಿಕ ಸಮಿತಿಗಳಿಂದ ಮಾತ್ರ ಕಸ ಘಟಕಗಳ ನಿರ್ವಹಣೆ ಸಾಧ್ಯ. ಬಿಬಿಎಂಪಿಯಿಂದ ಸಾಗಣೆಯಾದ ಕಸ ಅವೈಜ್ಞಾನಿಕವಾಗಿ ನಿರ್ವಹಣೆಯಾಗುತ್ತಿದೆ. ಹೀಗಾಗಿ ಘಟಕಗಳನ್ನು ಶಾಸಕರ ಅಧ್ಯಕ್ಷತೆಯ ನಾಗರಿಕ ಸಮಿತಿಗಳು ನಿರ್ವಹಣೆ ಮಾಡಬೇಕು.
2 ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ನೇತೃತ್ವದಲ್ಲಿ ಒಟ್ಟು 20 ಮಂದಿ ಒಳಗೊಂಡ ಸಮಿತಿ ರಚಿಸಬೇಕು. ಇದಕ್ಕೆ ಪರಿಸರ ತಜ್ಞರು, ವಿಜ್ಞಾನಿಗಳು, ರೈತರು, ಗೃಹಿಣಿಯರು, ಯುವಜನರನ್ನು ಸದಸ್ಯರನ್ನಾಗಿ ನೇಮಿಸಬೇಕು.
3 ಕೆಂಎಸಿ ಕಾಯ್ದೆಗೆ ತಿದ್ದುಪಡಿ ತಂದು, ಸಮಿತಿ ರಚಿಸಿ ಶಾಸನಾತ್ಮಕವಾದ ಅಧಿಕಾರ ನೀಡಬೇಕು.
4 ಪ್ರತಿ ಸಮಿತಿಗಳಿಗೆ 1 ಕೋಟಿ ರೂಪಾಯಿ ಅನುದಾನ ನೀಡಿ, ಕಸಕ್ಕೆ ಸಂಬಂಧ ಸಂಶೋಧನೆ ನಡೆಸಲು ಸೌಲಭ್ಯ ನೀಡಬೇಕು.
5 ಈ ಸಮಿತಿಗಳ ಮೂಲಕ ಕಸವನ್ನು ಆದಾಯ ತರುವ ಉತ್ಪನ್ನವಾಗಿ ಮಾರ್ಪಾಡು ಮಾಡಬೇಕು.
6 ಕಸವನ್ನು ಕಚ್ಚಾವಸ್ತುವಾಗಿ ಮಾರ್ಪಡಿಸಿ, ಪರಿಸರಕ್ಕೆ ಹಾನಿಯಾಗದಂತೆ ರಸ್ತೆ ನಿರ್ಮಾಣಕ್ಕೆ ಬಳಸಬಹುದು.
7 ಕಸದಿಂದ ಅನಿಲ ಉತ್ಪಾದನೆ, ವಿದ್ಯುತ್ ಉತ್ಪಾದನೆ ಸೇರಿದಂತೆ ಸಾರ್ವಜನಿಕರಿಗಾಗಿ ಬಳಸಬೇಕು. ಈ ರೀತಿಯ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸಿ ಆದಾಯ ಬರುವಂತೆ ಮಾಡಬೇಕು.