ಜಿಲ್ಲಾ ಸುದ್ದಿ

ಹಿಂದು ವಿರೋಧಿ ಧೋರಣೆ ಖಂಡಿಸಿ ಮಂಗಳೂರು ಬಂದ್, ಮುತಾಲಿಕ್ ಬಂಧನ

Srinivasamurthy VN

ಮಂಗಳೂರು: ರಾಜ್ಯ ಸರ್ಕಾರದ ಹಿಂದು ವಿರೋಧಿ ಧೋರಣೆ ಮತ್ತು ಹಿಂದು ಪರ ಹೋರಾಟಗಾರ ಗಿರೀಶ್ ಹತ್ಯೆ ಪ್ರಕರಣವನ್ನು ವಿರೋಧಿಸಿ ಶುಕ್ರವಾರ ಹಿಂದೂಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶ್ರೀರಾಮಸೇನೆ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸಲಾಗಿದೆ.

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಶುಕ್ರವಾರ ಮುಂಜಾನೆ ಪೊಲೀಸರು ಹಾಸನದಲ್ಲಿ ಬಂಧಿಸಿದ್ದು, ಮುತಾಲಿಕ್ ಖಾಸಗಿ ಹೊಟೆಲ್​ನಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ. ಅವರನ್ನು ಸೆಕ್ಷನ್ 107, 151ರ ಅಡಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸಿರುವ ಪೊಲೀಸರು ತಹಸೀಲ್ದಾರ್ ಎದುರು ಹಾಜರುಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಗುರುವಾರ ಸಂಜೆ ವಾಹನಗಳ ಮೇಲೆ ಸರಣಿ ದಾಳಿ ನಡೆದಿತ್ತು. ಈ ಪ್ರಕರಣದ ಹಿಂದೆ ಶ್ರೀರಾಮ ಸೇನೆಯ ಕಾರ್ಯಕರ್ತರ ಕೈವಾಡದ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಹಿಂದುಪರ ಕೆಲ ಸಂಘಟನೆಗಳು ಮಡಿಕೇರಿಯಲ್ಲಿ ನಡೆದ ಘಟನೆ ಖಂಡಿಸಿ ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದವು. ಅದರಲ್ಲಿ ಪಾಲ್ಗೊಳ್ಳಲಿಕ್ಕಾಗಿ ಮುತಾಲಿಕ್ ಗುರುವಾರ ರಾತ್ರಿಯೇ ಹಾಸನಕ್ಕೆ ಆಗಮಿಸಿದ್ದರು.

ಬಂದ್ ಗೆ ಉತ್ತಮ ಪ್ರತಿಕ್ರಿಯೆ
ಹಿಂದೂಪರ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ಮಂಗಳೂರು, ಹಾಸನದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಅಲ್ಲಲ್ಲಿ ಕೆಲವು ಸಣ್ಣ ಪುಟ್ಟ ಅಹಿತಕರ ಘಟನೆಗಳೂ ನಡೆದಿವೆ ಎನ್ನುವ ಮಾಹಿತಿ ಲಭ್ಯವಾಗುತ್ತಿವೆ. ಮಂಗಳೂರಿನಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿವೆ. ಕೆಲ ಪ್ರದೇಶಗಳಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ ಪ್ರಸಂಗವೂ ನಡೆದಿದೆ. ಕೆಲವೆಡೆ ಕಡಿಮೆ ಸಂಖ್ಯೆಯಲ್ಲಿ ಸಂಚಾರಕ್ಕಿಳಿದಿದ್ದ ಕೆಲ ಖಾಸಗಿ ಬಸ್​ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದು, ಘಟನಾ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

ನಿಷೇಧಾಜ್ಞೆ ಜಾರಿ
ಗುರುವಾರ ಸಂಜೆ ನಡೆದ ಘಟನೆಗಳ ಹಿನ್ನೆಲೆಯಲ್ಲಿ ಮಂಗಳೂರು ಜಿಲ್ಲೆಯಾದ್ಯಂತ ಮುಂಜಾಗ್ರತಾ ಕ್ರಮವಾಗಿ 4 ದಿನಗಳ ಕಾಲ ನಿಷೇಧಾಜ್ಙೆ ಜಾರಿಗೊಳಿಸಿರುವುದಾಗಿ ಪ್ರಭಾರ ಎಸ್ಪಿ ಶೋಭಾರಾಣಿ ತಿಳಿಸಿದ್ದಾರೆ.

SCROLL FOR NEXT