ಜಿಲ್ಲಾ ಸುದ್ದಿ

ಮುಖ್ಯಮಂತ್ರಿ ತೋಟದ ಮನೆ ಗೃಹ ಪ್ರವೇಶ; ಭರ್ಜರಿ ಹೋಮ ಹವನ

Srinivasamurthy VN

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ತಾಲೂಕು ಟಿ. ಕಾಟೂರು ಹತ್ತಿರದ ತಮ್ಮ ಎಂಟು ಎಕರೆ ತೋಟದಲ್ಲಿ ಹೊಸ ಮನೆ ನಿರ್ಮಿಸಿದ್ದು, ಅದರ ಗೃಹ ಪ್ರವೇಶ ಭಾನುವಾರ ನಡೆಯಿತು.

ಸಿದ್ದರಾಮಯ್ಯ ಅವರು ಪತ್ನಿ ಪಾರ್ವತಿ ಅವರೊಂದಿಗೆ ಪುರೋಹಿತರ ಸಮ್ಮುಖದಲ್ಲಿ ಹೋಮ, ಹವನ, ಪೂಜೆ ನೆರವೇರಿಸಿದರು. ಗೃಹಪ್ರವೇಶಕ್ಕಾಗಿ ಮೈಸೂರಿಗೆ ಬಂದಿದ್ದ ಸಿಎಂ, ಭದ್ರತಾ ಸಿಬ್ಬಂದಿಯನ್ನು ರಾಮಕೃಷ್ಣನಗರದ ಮನೆಯ ಹತ್ತಿರ ಬಿಟ್ಟು, ಖಾಸಗಿ ಕಾರಿನಲ್ಲಿ ಹೊಸ ಮನೆಗೆ ತೆರಳಿದರು. ಕುಟುಂಬ ಸದಸ್ಯರು ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

ಸಿದ್ದರಾಮಯ್ಯ ಅವರು ತಮ್ಮ ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ಅವರ ಹಳೆ ಮನೆ ಕೆಡವಿ ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಕೆಲವೊಂದು ಕಾರಣಗಳಿಂದಾಗಿ ನಿರ್ಮಾಣ ಸ್ಥಗಿತವಾಗಿತ್ತು. ನಂತರ ಅವರು ಟಿ. ಕಾಟೂರಿನ ತಮ್ಮ ತೋಟದಲ್ಲಿ ಮನೆ ನಿರ್ಮಾಣ ಆರಂಭಿಸಿದ್ದರು. ಈ ಹಿಂದೆ ಮೈಸೂರಿಗೆ ಬಂದಾಗ ಎರಡು ಬಾರಿ ಅಲ್ಲಿಗೆ ಭೇಟಿ ನೀಡಿದ್ದ ಅವರು, ನಿರ್ಮಾಣದ ಪ್ರಗತಿ ವೀಕ್ಷಿಸಿದ್ದರು. ಭದ್ರತಾ ಸಿಬ್ಬಂದಿಯನ್ನೂ ಅವರು ಜತೆಗೆ ಕರೆದೊಯ್ಯುತ್ತಿರಲಿಲ್ಲ.

ಕ್ಯಾಮೆರಾ ಕಿತ್ತುಕೊಂಡರು: ಸಿದ್ದರಾಮಯ್ಯ ಅವರು ಶುಕ್ರವಾರವಷ್ಟೇ ಮೈಸೂರಿಗೆ ಬಂದು ಹೋಗಿದ್ದರು. ಆದರೆ, ಪೂರ್ವನಿಯೋಜಿತ ಕಾರ್ಯಕ್ರಮಗಳು ಇಲ್ಲದಿದ್ದರೂ, ಭಾನುವಾರ ಮೈಸೂರಿಗೆ ದಿಢೀರ್ ಬಂದರು. ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ಸಿಕ್ಕಿತ್ತು. ಈ ವಿಷಯವನ್ನು ಬೆನ್ನುಹತ್ತಿದ ಮಾಧ್ಯಮದವರಿಗೆ ಸಿಎಂ ತೋಟದ ಮನೆಯ ಗೃಹ ಪ್ರವೇಶದ ವಿಷಯ ತಿಳಿದಿದೆ. ಕಾರ್ಯಕ್ರಮವನ್ನು ಚಿತ್ರೀಕರಿಸಲು ಯತ್ನಿಸಿದಾಗ ಮುಖ್ಯಮಂತ್ರಿಗಳ ಆಪ್ತರು ಕ್ಯಾಮೆರಾ ಕಸಿದುಕೊಂಡು ಅಡ್ಡಿಪಡಿಸಿದ ಘಟನೆಯೂ ನಡೆದಿದೆ.

SCROLL FOR NEXT