ಜಿಲ್ಲಾ ಸುದ್ದಿ

ಅಂಬೇಡ್ಕರ್ ವಿರುದ್ಧ ಹೇಳಿಕೆ: ಹುಚ್ಚ ವೆಂಕಟ್ ಬಂಧನ?

Srinivasamurthy VN

ಬೆಂಗಳೂರು: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಹುಚ್ಚ ವೆಂಕಟ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ವೆಂಕಟ್ ರನ್ನು ಬಸವೇಶ್ವರನಗರ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದು, ಪೊಲೀಸರು ವೆಂಕಟ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಪ್ರಸ್ತುತ ವೆಂಕಟ್ ಅವರನ್ನು ಪೊಲೀಸರು ಬಂಧಿಸಿರುವ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲದೇ ಇದ್ದರೂ, ಅಂಬೇಡ್ಕರ್ ವಿರುದ್ಧ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಬಳಿಕ ಅವರನ್ನು ಬಂಧಿಸಿ ಎಫ್ ಐಆರ್ ದಾಖಲಿಸಬೇಕೆ ಅಥವಾ ಮುಚ್ಚಳಿಕೆ ಪತ್ರ ಬರೆಸಿಕೊಂಡು ಬಿಟ್ಟುಬಿಡಬೇಕೆ ಎಂಬ ವಿಚಾರ ಪೊಲೀಸರ ವಿವೇಚನೆಗೆ ಬಿಟ್ಟ ವಿಚಾರವಾಗಿರುತ್ತದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ  ಹಿಂದೆ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡುತ್ತ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕೆಲ ದಲಿತ ಸಂಘಟನೆಗಳು ವೆಂಕಟ್ ವಿರುದ್ಧ ಪ್ರತಿಭಟನೆ ನಡೆಸಿದ್ದವು. ನಿನ್ನೆ ಸಂಜೆ ಮೈಸೂರು ರಸ್ತೆಯಲ್ಲಿರುವ ಜ್ಞಾನಭಾರತಿ ಆವರಣದಲ್ಲಿ ದಲಿತ ಸಂಘಟನೆಗಳು ಮತ್ತು ಕೆಲ ವಿದ್ಯಾರ್ಥಿ ಸಂಘಟನೆಗಳು ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ವೆಂಕಟ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದವು.

ಅಲ್ಲದೆ ಬಸವೇಶ್ವರ ನಗರದಲ್ಲಿವ ಅವರ ಮನೆ ಎದುರು ಕೂಡ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದರು ಎಂದು ತಿಳಿದುಬಂದಿದೆ. ಕೆಲ ದಲಿತ ಪರ ಸಂಘಟನೆಗಳು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರನ್ನು ಕೂಡ ನೀಡಿದ್ದವು ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಇಂದು ಬಸವೇಶ್ವರ ನಗರ ಪೊಲೀಸರು ಹುಚ್ಚ ವೆಂಕಟ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಸಹಸ್ಪರ್ಧಿ ಮೇಲೆ ಹಲ್ಲೆ ಮಾಡಿ ಬಿಗ್ ಬಾಸ್ ರಿಯಾಲಿಟಿ ಶೋ ದಿಂದ ಹೊರಬಂದ ವೆಂಕಟ್ ಪ್ರತಿದಿನ ಸುದ್ದಿ ವಾಹಿನಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ನವೆಂಬರ್ 17 ರಂದು ವಾಹಿನಿಯೊಂದರಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಸಂವಿಧಾನ, ಕಾನೂನು ಬಗ್ಗೆ ಮಾತನಾಡುತ್ತ ವೆಂಕಟ್ಅವಹೇಳನಕಾರಿ ಶಬ್ದವೊಂದನ್ನು ಬಳಕೆ ಮಾಡಿದ್ದರು. ಈ ಮೂಲಕ ದಲಿತರು ಮತ್ತು ಅಂಬೇಡ್ಕರ್ ಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆಗಳು ಬುಧವಾರ ಸಂಜೆ ಕಸ್ತೂರ ಬಾ ರಸ್ತೆ ಬಳಿ ಅವರಿಗೆ ಮಸಿ ಬಳಿದಿದ್ದವು.

SCROLL FOR NEXT