ಕಟ್ಟಡದಿಂದ ಜಿಗಿದ ವಂಚಕ(ಸಾಂದರ್ಭಿಕ ಚಿತ್ರ)
ಬೆಂಗಳೂರು: ಆನ್‍ಲೈನ್‍ನಲ್ಲಿ ಭಾರತೀಯರ ವಂಚಿಸುವುದರಲ್ಲಿ ಕುಖ್ಯಾತಿ ಗಳಿಸಿರುವ ನೈಜೀರಿಯಾದ ವಂಚಕನೊಬ್ಬ ಸಿಐಡಿ ತಂಡ ಬೆನ್ನಟ್ಟಿದ ಸಂದರ್ಭದಲ್ಲಿ ಕಟ್ಟಡದ 2ನೇ ಮಹಡಿಯಿಂದ ಜಿಗಿದು ತಪ್ಪಿಸಿಕೊಂಡಿದ್ದಾನೆ!
ಇತ್ತೀಚೆಗೆ ಆವಲಹಳ್ಳಿ ಸಮೀಪದ ಹಿರೇಗೊಂಡನಹಳ್ಳಿಯಲ್ಲಿ ಕೆಲ ನೈಜೀರಿಯಾ ಪ್ರಜೆಗಳ ಬಂಧನಕ್ಕೆ ಸಿಐಡಿ ತಂಡ ತೆರಳಿತ್ತು. ಈ ವೇಳೆ ಮೂವರ ಪೈಕಿ ಇಬ್ಬರನ್ನು ಮಾತ್ರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮತ್ತೊಬ್ಬ 2ನೇ ಮಹಡಿಯಿಂದ ಜಿಗಿದು ಪರಾರಿಯಾಗಿದ್ದಾನೆ. ಕೆಳಗೆ ಜಿಗಿದ ಬಳಿಕ ಆತನಿಗೆ
ಏನಾದರೂ ಆಗಿರಬಹುದೆಂದು ಆತಂಕಿತರಾಗಿದ್ದೆವು. ಆದರೆ, ನಾವು ಬಂದು ನೋಡುವಷ್ಟರಲ್ಲಿ ಆತ ಜಿಂಕೆಯಂತೆ ಓಡಿ ಹೋದ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ದೈಹಿಕವಾಗಿ ಅತ್ಯಂತ ಸಮರ್ಥ ಹಾಗೂ ಬಲಾಢ್ಯರಾಗಿರುವ ನೈಜೀರಿಯಾ ಪ್ರಜೆಗಳನ್ನು ಬಂಧಿಸುವುದು ಪೊಲೀಸರಿಗೆ ಒಂದು ಸವಾಲಿನ ಕೆಲಸ. ಆನ್‍ಲೈನ್ ವಂಚನೆ ಹಾಗೂ ಮಾದಕ ವಸ್ತುಗಳ ಮಾರಾಟ ಸಂಬಂಧ ಮಾಹಿತಿ ಆಧರಿಸಿ ಪೊಲೀಸರು ನೈಜೀರಿಯಾ ಪ್ರಜೆಗಳ ಬಂಧನಕ್ಕೆ ತೆರಳಿದ್ದರು. ಕಡಿಮೆ ಪೊಲೀಸ್ ಸಿಬ್ಬಂದಿ ಹೋದರೆ ಸಾಲದು. ಒಬ್ಬರನ್ನು ಹಿಡಿಯಲು ಕನಿಷ್ಠ ಇಬ್ಬರಿಂದ ನಾಲ್ಕು ಮಂದಿ ಬೇಕಾಗುತ್ತದೆ. ಎಷ್ಟೋ ಬಾರಿ ಅವರು ನಮ್ಮ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗುತ್ತಾರೆ ಎಂದು ಹಿರಿಯ ಅಧಿಕಾರಿ ಹೇಳಿದರು.
ಆನ್‍ಲೈನ್ ಮೂಲಕ ಸಾರ್ವಜನಿಕರಿಗೆ ವಂಚಿಸುವ ನೈಜೀರಿಯಾ ಪ್ರಜೆಗಳ ದೊಡ್ಡ ಜಾಲ ಆವಲಹಳ್ಳಿ ಸಮೀಪದ ಹಿರೇಗೊಂಡನಹಳ್ಳಿಯಲ್ಲಿ ನೆಲೆಸಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಸಿಐಡಿ ಅಧಿಕಾರಿಗಳ ತಂಡ ಗುರುವಾರ ದಾಳಿ ನಡೆಸಿತ್ತು. ಈ ವೇಳೆ ಇಬ್ಬರನ್ನು ಬಂಧಿಸಿ ಲ್ಯಾಪ್‍ಟಾಪ್ ಸೇರಿದಂತೆ ಕೆಲ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಎನೆಗಾ ಚೆಲಿಯನ್ (28) ಹಾಗೂ ಅನೋವಾ ಅಚೋಕ (31) ಬಂಧಿತರು. ಮಹಿಳೆ ಸೇರಿದಂತೆ ಇನ್ನು ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಈ ಪೈಕಿ ಒರ್ವ 2 ಮಹಡಿಯಿಂದ ಜಿಗಿದು ಓಡಿ ಹೋಗಿದ್ದಾನೆ.