ಬೆಂಗಳೂರು: ರಾಜ್ಯದ ಹತ್ತು ಹಲವು ಶೈಕ್ಷಣಿಕ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಏಕ ಕಾಲಕ್ಕೆ ರಾಜ್ಯಮಟ್ಟದ ಶಿಕ್ಷಣದ ಪರಿವರ್ತನೆಗಾಗಿ ರ್ಯಾಲಿಯನ್ನು ಆಯೋಜಿಸಿದೆ.
ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಎಬಿವಿಪಿ ರಾಜ್ಯ ಕಾರ್ಯದರ್ಶಿ ಸುನಿಲ್ ಕುಮಾರ್ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪ್ರೇಮ್, ಅಕ್ಟೋಬರ್ 6 ರಂದು ನಡೆಯುವ ರ್ಯಾಲಿಗೆ ಸಾಕಷ್ಟು ಪೂರ್ವತಯಾರಿ ನಡೆಸಿದ್ದು, ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಯನ್ನು ಸರ್ಕಾರದ ಮುಂದೆ ಗಮನ ಸೆಳೆಯಲಾಗುತ್ತದೆ ಎಂದರು.
ಶೈಕ್ಷಣಿಕ ಅಧೋಗತಿ: ರಾಜ್ಯದಲ್ಲಿ ಡೋನೇಶನ್ ಹಾವಳಿ, ಮೂಲಭೂತ ಸೌಕರ್ಯ, ಗಾಸ್ಟೆಲ್ ಸ್ಥಿತಿಗತಿ, ಮೆಡಿಕಲ್-ಇಂಜಿನಿಯರಿಂಗ್ ಶುಲ್ಕ ಹೆಚ್ಚಳ, ಹಿಂದುಳಿದ ವರ್ಗದ ಮತ್ತು ಎಸ್.ಸಿ/ ಎಸ್.ಟಿ ವಿದ್ಯಾರ್ಥಿ ವೇತನದಲ್ಲಿ ಸಮಸ್ಯೆ ಹೀಗೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶೈಕ್ಷಣಿಕ ವ್ಯವಸ್ಥೆಯು ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಎಬಿವಿಪಿ ಮುಖಂಡರು ಆರೋಪಿಸಿದರು.
ರಾಜ್ಯದಲ್ಲಿರುವ ಹಿಂದುಳಿದ ವರ್ಗ ಎಸ್.ಸಿ/ಎಸ್.ಟಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿ ಸಮರ್ಪಕವಾಗಿ ಜಾರಿಯಾಗಿಲ್ಲ. ಎರಡು ವರ್ಷದ ವಿದ್ಯಾರ್ಥಿ ವೇತನ ಈ ವರೆಗೂ ಬಹುತೇಕ ವಿದ್ಯಾರ್ಥಿಗಳಿಗೆ ತಲುಪಿಲ್ಲ. ಅಂತೆಯೇ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಸೌಲಭ್ಯವನ್ನು ಪ್ರವೇಶ ಸಂದರ್ಭದಲ್ಲೇ ನೀಡಬೇಕು. ಆದರೆ ರಾಜ್ಯದ ಬಹುತೇಕ ಎಲ್ಲಾ ಕಾಲೇಜುಗಳು ಸರ್ಕಾರಿ ಆದೇಶವನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳನ್ನು ಬೆದರಿಸಿ ಹಣ ವಸೂಲಿಗೆ ನಿಂತಿರುವುದು ಸರ್ಕಾರದ ಆಡಳಿತಕ್ಕೆ ಹಿಡಿದಿರುವ ಕೈಗನ್ನಡಿಯಾಗಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಹಾಸ್ಟೆಲ್ ಗಳಲ್ಲಿ ನೀಡುತ್ತಿರುವ ಆಹಾರದ ಗುಣಮಟ್ಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಸಂಪೂರ್ಣ ವಿಫಲತೆಯನ್ನು ಹೊಂದಿದ್ದು, ಈ ಬಗ್ಗೆ ತಕ್ಷಣವೇ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿ ಪರಿಹಾರಕ್ಕೆ ಮುಂದಾಗಬೇಕು ಎಂದರು.