ಜಿಲ್ಲಾ ಸುದ್ದಿ

ಕಾವೇರಿಯಲ್ಲೇ ಕಾವೇರಿಗಾಗಿ ಸಿಎಂಗೆ ಕೊಡವರ ಮನವಿ

Sumana Upadhyaya

ಬೆಂಗಳೂರು: ಭಾನುವಾರದ ಶಾಂತ ಬೆಂಗಳೂರನ್ನು ಅದಕ್ಕಿಂತಲೂ ಶಾಂತವಾಗಿ ಪಾದಯಾತ್ರೆ ಮೂಲಕ ಪ್ರವೇಶಿಸಿದ ಕೊಡವರು, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಸೆ.18ರಿಂದ ಕೊಡಗಿನ ತಲಕಾವೇರಿಯಿಂದ ಆರಂಭವಾಗಿ ಭಾನುವಾರ ಬೆಂಗಳೂರಿನ ಜ್ಞಾನಭಾರತಿ ಆವರಣಕ್ಕೆ ಬರುವ ಮೂಲಕ ಯುಕೆಓ ಸದಸ್ಯರ `ಜಬ್ಬೂಮಿ ಬಾಳೋ-2015' (ಜನ್ಮ-ಭೂಮಿ ಬಾಳಲಿ) ಪಾದಯಾತ್ರೆ ಯಶಸ್ವಿಯಾಯಿತು.

ಬೆಳಗ್ಗೆ 5.30ಕ್ಕೆ ಜ್ಞಾನಭಾರತಿ ಬಳಿ ತಲುಪಿದ ಸದಸ್ಯರು,ನಂತರ ಸಂಜೆ ಮುಖ್ಯಮಂತ್ರಿಗಳ ನಿವಾಸ `ಕಾವೇರಿ'ಗೆ ತೆರಳಿ ಮನವಿ ಸಲ್ಲಿಸಿದರು. 17 ದಿನಗಳ ಕಾಲ ನಡೆದ ಪಾದಯಾತ್ರೆಯಲ್ಲಿ 20 ಸಾವಿರ ಮಂದಿ ಪಾಲ್ಗೊಂಡಿದ್ದು, ಭಾನುವಾರ ಒಂದೇ ದಿನ 8,000 ಮಂದಿ ಭಾಗವಹಿಸಿದ್ದರು. ಜ್ಞಾನಭಾರತಿ ಆವರಣದಿಂದ ವಸಂತನಗರದ ಕೊಡವ ಸಮಾಜಕ್ಕೆ ಬಂದು ಪಾದಯಾತ್ರೆ ಕೊನೆಗೊಳಿಸಲಾಯಿತು.ನಂತರ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿದ ಪ್ರಮುಖ ಮುಖಂಡರು ಮನವಿ ಸಲ್ಲಿಸಿದರು.

ಕೊಡಗಿನ ಭತ್ತದ ಕೃಷಿ ಉಳಿಸಬೇಕು, ಕಾಫಿ ಬೆಳೆಗಾರರ ಭೂಮಿ ಸಕ್ರಮ ಮಾಡಬೇಕು, ಪಾರಂಪರಿಕ ತಾಣಗಳ ರಕ್ಷಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಯುನೈಟೆಡ್ ಕೊಡವ ಆರ್ಗನೈಜೇಶನ್ (ಯುಕೆಓ) ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಕೊಡವರ ಭೂಮಿ ಉಳಿಸಿ: ಪಾದಯಾತ್ರೆಯಲ್ಲಿ ನಗರಕ್ಕೆ ಆಗಮಿಸಿ ಮಾತನಾಡಿದ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಕೊಡಗಿನಲ್ಲಿ ಭತ್ತ ಬೆಳೆಯುವುದೇ ಕಷ್ಟವಾಗಿದೆ. ಜಿಲ್ಲೆಯ ಸಂಸ್ಕೃತಿ ಉಳಿಸಬೇಕೆಂದರೆ ಭತ್ತದ ಗದ್ದೆಗಳನ್ನು ಸಂರಕ್ಷಿಸಬೇಕಿದೆ. ಜಿಲ್ಲೆಯಲ್ಲಿ 35,000 ಹೆ.ಗದ್ದೆ ಇದ್ದು, ಪಾಳು ಬೀಳುವ ಭೀತಿಯಲ್ಲಿದೆ. ಗದ್ದೆಯಲ್ಲಿ ನೀರು ನಿಲ್ಲುವುದರಿಂದ ಕಾವೇರಿ ನೀರಿನ ಹರಿವಿನ ಪ್ರಮಾಣ ಹೆಚ್ಚಿ ರಾಜ್ಯದ 35 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲು ಸಹಕಾರಿಯಾಗುತ್ತದೆ. ಪ್ರತಿ ಎಕರೆ ಜಾಗದಲ್ಲಿ ಭತ್ತ ಬೆಳೆಯುವವರಿಗೆ 10,000 ರೂಪಾಯಿ ಪ್ರೋತ್ಸಾಹ ಧನ ನೀಡಬೇಕು ಎಂದರು.

ಸಂಸ್ಕೃತಿ ಉಳಿಸಲು ಮೊರೆ:
ಕೊಡವರ ಪಾರಂಪರಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕೇಂದ್ರಗಳನ್ನು ಸರ್ಕಾರ ಉಳಿಸಬೇಕು. ಮಂದ್ ಮಾನಿ, ವಾಡೆ, ದೇವಡಬನ,ಗೋಮಾಳ, ಕ್ಯಾಕೋಳ ಸೇರಿದಂತೆ ಹಲವು ಐತಿಹಾಸಿಕ ಸ್ಥಳಗಳ ಕಂದಾಯ ದಾಖಲಾತಿಯಲ್ಲಿ ಸರ್ಕಾರಕ್ಕೆ ಸೇರಿದ್ದು ಎಂದಿದೆ. ಇದರಿಂದಾಗಿ ಸರ್ಕಾರದ ಕಟ್ಟಡ ನಿರ್ಮಾರ್ಣಕ್ಕೆ ಈ ಜಾಗ ಬಳಕೆಯಾಗುತ್ತಿದೆ. ಇಂತಹ ಸ್ಥಳಗಳನ್ನು ಸಂರಕ್ಷಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸಿಎಂ ಗಮನಕ್ಕೆ ತಂದರು.

SCROLL FOR NEXT