ಜಿಲ್ಲಾ ಸುದ್ದಿ

ರಾಜ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಬಾಲಕನ ಶವ ಪತ್ತೆ

Shilpa D

ಬೆಂಗಳೂರು: ಥಣಿಸಂದ್ರದ ವಾರ್ಡ್‌ನ ಮಾನ್ಯತಾ ಟೆಕ್‌ಪಾರ್ಕ್‌ ಹಿಂಭಾಗದ ರಾಜಕಾಲುವೆಯಲ್ಲಿ  ಬುಧವಾರ ಈಜಲು ತೆರಳಿ ನೀರುಪಾಲಾಗಿದ್ದ 9ನೇ ತರಗತಿಯ ವಿದ್ಯಾರ್ಥಿ ಪ್ರಕಾಶ್‌ ಶವ ಗುರುವಾರ ಬೆಳಗ್ಗೆ ಪತ್ತೆಯಾಗಿದೆ.

ದೇವರಜೀವನಹಳ್ಳಿ (ಡಿ.ಜೆ.ಹಳ್ಳಿ) ಬಳಿಯ ಪಿ ಅಂಡ್‌ ಟಿ ಕಾಲೋನಿ ನಿವಾಸಿವೆಂಕಟೇಶ್‌ ಅವರ ಪುತ್ರ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ ವೇಳೆ ಶವ ಪತ್ತೆ ಯಾಗಿದೆ. ಪ್ರಕಾಶ್‌ ತನ್ನ ಸಹೋದರ ಹಾಗೂ ಸ್ನೇಹಿತರೊಂದಿಗೆ ರಾಜಕಾಲುವೆಗೆ ಮಧ್ಯಾಹ್ನ ಈಜಾಡಲು ತೆರಳಿದ್ದಾಗ ದುರಂತ ನಡೆದಿತ್ತು.

ಬೆಂಗಳೂರು ತಮಿಳು ಸಂಘಂ ಸ್ಕೂಲ್‌ ನಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿರುವ ಪ್ರಕಾಶ್‌, ಅರ್ಧವಾರ್ಷಿಕ ಪರೀಕ್ಷೆ ಮುಗಿಸಿ ತನ್ನ ಅಣ್ಣ ಸೂರ್ಯ, ಗೆಳೆಯ ಚಾರ್ಲ್ಸ್‌ ಜತೆ ಮಾನ್ಯತಾ ಟೆಕ್‌ಪಾರ್ಕ್‌ ಬಳಿಯ ರಾಜಕಾಲುವೆ ಈಜಾಡಲು ಹೋಗಿದ್ದ. ಸತತ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ದಾಸರಹಳ್ಳಿ ಕೆರೆಯಿಂದ ಹೆಣ್ಣೂರು ಕೆರೆಗೆ ಸೇರುವ ಈ ರಾಜಕಾಲುವೆಯಲ್ಲಿ ನೀರಿನ ಹರಿವು ರಭಸವಾಗಿತ್ತು. ಇದನ್ನು ಅರಿಯದ ಪ್ರಕಾಶ್‌ ನೀರಿನಲ್ಲಿ ಆಟವಾಡಲು ಇಳಿದು ಆಯತಪ್ಪಿ ಬಿದ್ದು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ.

SCROLL FOR NEXT