ಜಿಲ್ಲಾ ಸುದ್ದಿ

ಗೋವಿಂದರಾಜು ಜಾಮೀನು ರದ್ದು ಮಾಡಿದ ಹೈಕೋರ್ಟ್

Srinivasamurthy VN

ಬೆಂಗಳೂರು: ಆರ್ ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣ ಸಂಬಂಧ ಬಂಧಿತನಾಗಿ ಜಾಮೀನಿನ ಮೇಲೆ ಹೊರಗಿದ್ದ ಮಾಜಿ ಪಾಲಿಕೆ ಸದಸ್ಯೆ ಗೌರಮ್ಮ ಅವರ ಪತಿ ಗೋವಿಂದರಾಜು  ಅವರ ಜಾಮೀನನ್ನು ಗುರುವಾರ ಹೈಕೋರ್ಟ್ ರದ್ದು ಮಾಡಿದೆ.

ಪ್ರಕರಣ ಸಂಬಂಧ ಗೋವಿಂದರಾಜು ಅವರ ಜಾಮೀನು ಅರ್ಜಿಯನ್ನು ರದ್ದುಗೊಳಿಸುವಂತೆ ವಿಶೇಷ ಅಭಿಯೋಕ ಸದಾಶಿವ ಮೂರ್ತಿ ಅವರು ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ಗೋವಿಂದರಾಜು ಅವರ ಜಾಮೀನನ್ನು ರದ್ದು ಮಾಡಿದೆ.

ಆರ್ ಟಿಐ ಕಾರ್ಯಕರ್ತ ಲಿಂಗರಾಜು ಅವರನ್ನು ಅವರ ಮನೆ ಮುಂಭಾಗದಲ್ಲಿಯೇ ಬರ್ಬರವಾಗಿ ಹತ್ಯೆ ಗೈಯ್ಯಲಾಗಿತ್ತು.  ಪ್ರಕರಣ ಸಂಬಂಧ ಅಂದಿನ ಪಾಲಿಕೆ ಸದಸ್ಯೆ ಗೌರಮ್ನ ಅವರ ಪತಿ ಮತ್ತಿತ್ತರನ್ನು ಬಂಧಿಸಲಾಗಿತ್ತು. ಕಳೆದ ಜುಲೈನಲ್ಲಿ ಗೋವಿಂದರಾಜುಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಈ ಜಾಮೀನು ನೀಡಿಕೆಯಲ್ಲಿ ಲೋಪವಾಗಿದೆ ಎಂದು ಹೇಳಿದ್ದ ವಿಶೇಷ ಅಭಿಯೋಜಕ ಸದಾಶಿವಮೂರ್ತಿ ಅವರು, ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಇಂದು ವಾದ ಮಂಡಿಸಿದ ಸದಾಶಿವಮೂರ್ತಿ ಅವರು, "ಲಿಂಗರಾಜು ಹತ್ಯೆ ಸಂಬಂಧ ಕರ್ನಾಟಕ ಹೈಕೋರ್ಟ್ ಹೈಕೋರ್ಟ್ ಸ್ವಪ್ರೇರಿತವಾಗಿ ಪಿಐಎಲ್ ದಾಖಲು ಮಾಡಿಕೊಂಡು ವಿಶೇಷ  ಅಭಿಯೋಜಕರಾಗಿ ತಮ್ಮನ್ನು ನೇಮಕ ಮಾಡಿತ್ತು. ಹೀಗಾಗಿ ತಾವೇ ಟ್ರಯಲ್ ಕೋರ್ಟ್ ಮತ್ತು ಹೈಕೋರ್ಟ್ ನಲ್ಲಿ ವಾದ ಮಾಡಬೇಕಿತ್ತು. ಜಾಮೀನು ನೀಡಿಕೆ ಮುನ್ನ ನ್ಯಾಯಾಲಯ ತಮ್ಮ  ಆಕ್ಷೇಪಣೆಯನ್ನು ಕೂಡ ಪರಿಗಣಿಸಬೇಕಿತ್ತು. ಈ ಹಿಂದೆ ಗೋವಿಂದರಾಜು ಸಲ್ಲಿಸಿದ್ದ ಹಲವು ಜಾಮೀನು ಅರ್ಜಿಗಳು ವಜಾಗೊಂಡಿದ್ದು, ಪ್ರಕರಣ ಸಂಬಂಧ ಇತರೆ ಆರೋಪಿಗಳು ಸಲ್ಲಿಸಿದ್ದ  ಜಾಮೀನು ಅರ್ಜಿ ಕೂಡ ವಜಾಗೊಂಡಿದ್ದವು. ಸುಪ್ರೀಂಕೋರ್ಟ್ ಕೂಡ ಜಾಮೀನು ನೀಡಿಕೆಗೆ ನಿರಾಕರಿಸಿತ್ತು".

"ಆರೋಪಿ ಪರ ವಕೀಲರು ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದಾಗ  ಪ್ರತಿವಾದಿಯಾಗಿ ವಿಶೇಷ ಅಭಿಯೋಜಕರನ್ನು ಪ್ರತಿವಾದಿಯಾಗಿ ಮಾಡಬೇಕಿತ್ತು. ಈ ಸಂಬಂದ ಹೈಕೋರ್ಟ್ ನೋಟಿಸ್ ಜಾರಿ ಮಾಡಬೇಕಿತ್ತು. ಆದರೆ ನೋಟಿಸ್ ಜಾರಿ ಮಾಡದೆಯೇ ಅದೇ  ಕೋರ್ಟ್ ನಲ್ಲಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ವಾದವನ್ನು ಕೇಳಿ ಜಾಮೀನು ಮಂಜೂರು ಮಾಡಲಾಗಿತ್ತು. ನ್ಯಾಯಾಲಯ ನೀಡಿದ್ದ ಆದೇಶ ತಪ್ಪು ಗ್ರಹಿಕೆ ಮತ್ತು ತಪ್ಪು ಮಾಹಿತಿಯಿಂದ ಕೂಡಿದ  ಆದೇಶವಾಗಿದ್ದು, ಅದನ್ನು ಹಿಂಪಡೆಯಬೇಕು" ಎಂದು ಅವರು ಮನವಿ ಮಾಡಿದ್ದರು.

ವಿಶೇಷ ಅಭಿಯೋಜಕ ಸದಾಶಿವ ಮೂರ್ತಿ ಅವರ ವಾದವನ್ನು ಮನ್ನಿಸಿದ ನ್ಯಾಯಾಲಯ ನಿನ್ನೆ ಈ ಹಿಂದೆ ನೀಡಿದ್ದ ಆದೇಶವನ್ನು ಹಿಂಪಡೆದಿದ್ದು, ಗೋವಿಂದರಾಜು ಅವರ ಜಾಮೀನನ್ನು  ರದ್ದುಗೊಳಿಸಿದೆ. ಇದೀಗ ಆರೋಪಿ ಗೋವಿಂದರಾಜು ಮತ್ತೆ ಟ್ರಯಲ್ ಕೋರ್ಟ್ ಹಾಜರಾಗಬೇಕಿದ್ದು, ವಿಚಾರಣೆ ಬಳಿಕ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಬೇಕಿದೆ.

SCROLL FOR NEXT