ಜಿಲ್ಲಾ ಸುದ್ದಿ

ಶೀಘ್ರ ಐದು ಸಾವಿರ ನಿವೇಶನಕ್ಕೆ ಅರ್ಜಿ

Rashmi Kasaragodu
ಬೆಂಗಳೂರು: ಅಂತೂ ಇಂತೂ ಕೆಂಪೇಗೌಡ ಬಡಾವಣೆಯ ನಿವೇಶನಗಳಿಗೆ ಹಂಚಿಕೆಯ ಭಾಗ್ಯ ಕೂಡಿ ಬಂದಿದೆ. ಇನ್ನು ಒಂದು ವಾರದೊಳಗೆ ಬಿಡಿಎ 5 ಸಾವಿರ ನಿವೇಶನಗಳ ಹಂಚಿಕೆಗೆ ಅರ್ಜಿ ಆಹ್ವಾನಿಸಲಿದೆ. ಕಳೆದ 10 ವರ್ಷಗಳಲ್ಲಿ ಬಿಡಿಎ ಒಂದು ಬಾರಿಯೂ ನಿವೇಶನ ಹಂಚಿಕೆ ಮಾಡಿಲ್ಲ. ಈ ಕುರಿತು ಫೆಬ್ರವರಿಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿವೇಶನಗಳನ್ನು ಶೀಘ್ರದಲ್ಲಿ ಹಂಚಿಕೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ನಗರದಲ್ಲಿ ಲಕ್ಷಾಂತರ ಹಿರಿಯ ನಾಗರಿಕರು ನಿವೇಶನ ಹಂಚಿಕೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ, ಹತ್ತು ವರ್ಷಗಳಿಂದ ಈ ನಿರೀಕ್ಷೆಯನ್ನು ಸರ್ಕಾರ ಮುಂದೂಡುತ್ತಲೇ ಬಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಭರವಸೆಯಂತೆ ಈಗ ಅರ್ಜಿ ಕರೆಯಲು ಸಿದ್ಧತೆ ನಡೆದಿದೆ.
ನಿವೇಶನ ಹಂಚಿಕೆಗೆ ಮಾರ್ಚ್‍ನಲ್ಲೇ ಅರ್ಜಿ ಆಹ್ವಾನ ಪ್ರಕ್ರಿಯೆ ನಡೆದಿತ್ತು. ಆದರೆ , ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಿಗೆ ಮೀಸಲು ನಿಗದಿ ಮಾಡುವ ಕುರಿತು ಗೊಂದಲ ಸೃಷ್ಟಿಯಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು ರಾಜ್ಯ ಸರ್ಕಾರ ಶೇ.16ರಷ್ಟು ಮೀಸಲು ನೀಡಲು ಅನುಮತಿ ನೀಡಿದ್ದರಿಂದ ಇನ್ನು ಒಂದು ವಾರದೊಳಗೆ ಅಧಿಸೂಚನೆ  ಹೊರಡುವ ಸಾಧ್ಯತೆಯಿದೆ. ಈ 5 ಸಾವಿರ ನಿವೇಶನಗಳಿಗೆ ಬ್ಲಾಕ್ ಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ.   20-30, 30-40, 40-60 ಹಾಗೂ 60-80 ವಿಸ್ತೀಣರ್ಣಗಳ ನ ನಾಲ್ಕು ವಿಸ್ತೀರ್ಣಗಳಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ. ಬಡಾವಣೆಯ 12 ಕಿ. ಮೀ. ಉದ್ದ 100 ಅಡಿ ರಸ್ತೆಯನ್ನೂ ನಿರ್ಮಾಣ ಮಾಡಲಾಗಿದೆ. ಹೀಗಾಗಿ ನಿವೇಶನ ಹಂಚಿದರೆ ಬಿಡಿಎ ಕೆಲಸ ಇನ್ನೂ ಸುಗಮವಾಗಲಿದೆ.
ಕೆಂಪೇಗೌಡ ಬಡಾವಣೆಯಲ್ಲಿ ಒಟ್ಟು 25 ಸಾವಿರ ನಿವೇಶನ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಆದರೆ ಇಷ್ಟು ಪ್ರಮಾಣದ ನಿವೇಶನ ರಚಿಸವು 2,600 ಎಕರೆ ಜಾಗಬೇಕು. ಕಾರಣಾಂತರಗಳಿಂದ ಇದುವರೆಗೆ ಕೇವಲ 2 ಸಾವಿರ ಭೂಸ್ವಾಧೀನ ಮಾಡಿಕೊಳ್ಳಲು ಮಾತ್ರ ಬಿಡಿಎಗೆ ಸಾಧ್ಯವಾಗಿದೆ. ಇನ್ನೂ ಹಲವು ಕಡೆಗಳಲ್ಲಿ ಭೂಸ್ವಾಧೀನ ಮಾಡಿಕೊಳ್ಳಬೇಕಿದೆ. ಕೆಲವು ಕಡೆಗಳಲ್ಲಿ  ರಚನೆಯಾಗುತ್ತಿರುವ ನಿವೇಶನಗಳ ಮಧ್ಯ  ಭಾಗದಲ್ಲೇ ಭೂಸ್ವಾಧೀನ ವಾಗಿಲ್ಲ. ಹೀಗಾಗಿ ಒಮ್ಮೆಗೇ 25 ಸಾವಿರ ನಿವೇಶನ  ಮಾಡಲು   ಸಾಧ್ಯವಿಲ್ಲ. ಆದ್ದರಿಂದ ಮೊದಲ ಹಂತವಾಗಿ 5 ಸಾವಿರ ನಿವೇಶನ ನೀಡಲು ತೀರ್ಮಾನಿಸಲಾಗಿದೆ. ನಂತರ ಯೋಜನೆ ವಿಸ್ತರಣೆ ಮಾಡುವ  ಹಂತದಲ್ಲಿ ಭೂಸ್ವಾಧೀನ ಮಾಡಿಕೊಂಡು ನಿವೇಶನ ಮಾಡಲಾಗುತ್ತದೆ.
ಅಧಿಕ ಪ್ರಮಾಣದಲ್ಲಿ ದರ, ಅರ್ಜಿದಾರ ಬಿಡಿಎ ವಿತರಿಸುವ ಒಂದು ನಿವೇಶನಕ್ಕೆ ರು.20-30 ಲಕ್ಷ ಬೆಲೆ ಇದೆಯೆಂದು ಅಂದಾಜಿಸಲಾಗಿದೆ. ಭೂಸ್ವಾಧೀನ ಪಡಿಸಿಕೊಳ್ಳುವಾಗ ಭೂಮಾಲೀಕರು ಹೆಚ್ಚಿನ ದರ ಕೇಳುವುದರಿಂದ ಸಹಜವಾಗಿಯೇ ಭೂಮಿಯ ದರ ಏರಲಿದೆ. ಈಗ ರಚಿಸಿರುವ ನಿವೇಶನಗಳಿಗೂ ಇದೇ ಸಮಸ್ಯೆಯಿರುವುದರಿಂದ ಸಾಮಾನ್ಯಕ್ಕಿಂತ ಹೆಚ್ಚಿನ ದರ ನಿಗದಿಯಾಗುವ ಸಾಧ್ಯತೆಯಿದೆ. ಅಲ್ಲದೆ, ಇಷ್ಟು ವರ್ಷಗಳ ಬಳಿಕ ಅರ್ಜಿ ಕರೆದಿರುವುದರಿಂದ ಅರ್ಜಿದಾರರ ಸಂಖ್ಯೆಯೂ ಲಕ್ಷ ದಾಟುವ ನಿರೀಕ್ಷೆಯಿದೆ.
.
SCROLL FOR NEXT