ಬೆಂಗಳೂರು: ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯ ಘಟಕವು ಲಂಚಮುಕ್ತ ಕರ್ನಾಟಕ ಅಭಿಯಾನದ ಅಂಗವಾಗಿ ಆರಂಭಿಸಿರುವ ಭ್ರಷ್ಟಾಚಾರ ವಿರೋಧಿ ಸಹಾಯವಾಣಿಗೆ ಶನಿವಾರ ಚಾಲನೆ ನೀಡಲಾಯಿತು.
ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ಸಹಾಯವಾಣಿ ಉದ್ಘಾಟಿಸಿ ಮಾತನಾಡಿ, ದೇಶದಾದ್ಯಂತ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ರಾಜ್ಯವೂ ಇದಕ್ಕೆ ಹೊರತಾಗಿಲ್ಲ. ಈ ಕೆಲಸ ಐವತ್ತು ವರ್ಷಗಳ ಹಿಂದೆಯೇ ಆಗಬೇಕಿತ್ತು' ಎಂದು ಹೇಳಿದರು.
ಸರ್ಕಾರಿ ಕಚೇರಿಗಳಲ್ಲಿ ಲಂಚದಿಂದಾಗಿ ಸಾಮಾನ್ಯ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಆಮ್ ಆದ್ಮಿ ಪಕ್ಷವು ಒಳ್ಳೆಯ ಕಾರ್ಯ ಹಮ್ಮಿಕೊಂಡಿದೆ. ಇದು ನಿರಂತರವಾಗಿ ನಡೆಯಬೇಕು ಎಂದರು.
ಪಕ್ಷದ ರಾಜ್ಯ ಘಟಕದ ವಕ್ತಾರ ರವಿಕೃಷ್ಣಾ ರೆಡ್ಡಿ ಮಾತನಾಡಿ, ಇಡೀ ದೇಶಕ್ಕೆ ಮಾದರಿಯಾಗಿದ್ದ ರಾಜ್ಯದ ಲೋಕಾಯುಕ್ತ ಸಂಸ್ಥೆಯು ಭ್ರಷ್ಟಾಚಾರದ ಕೂಪವಾಗಿದೆ.ಸರ್ಕಾರಿ ಕಚೇರಿಗಳಲ್ಲಿ ಲಂಚ ಕೊಡದೆ ಯಾವುದೇ ಕೆಲಸ ಆಗುವುದಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಭ್ರಷ್ಟಾಚಾರವನ್ನು ಮಟ್ಟ ಹಾಕಲು ನಮ್ಮ ಪಕ್ಷದ ವತಿಯಿಂದ ಸಹಾಯವಾಣಿ (9342522223) ಆರಂಭಿಸಲಾಗಿದೆ. ರಾಜ್ಯದ ಯಾವುದೇ ಭಾಗದಿಂದ ಸಹಾಯವಾಣಿಗೆ ಕರೆ ಮಾಡಿದರೆ, ಪಕ್ಷದ ಕಾರ್ಯಕರ್ತರು ಕಚೇರಿಗೆ ಹೋಗಿ ಅದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಸರಿಪಡಿಸಲಿದ್ದಾರೆ. ಆ ನಂತರವೂ ಸರಿಯಾಗದಿದ್ದರೆ ಸಂಬಂಧಪಟ್ಟ ಕಚೇರಿ ಎದುರು ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪೃಥ್ವಿ ರೆಡ್ಡಿ ಮಾತನಾಡಿ, ದೆಹಲಿಯಲ್ಲಿ ನಮ್ಮ ಪಕ್ಷದ ಸಚಿವರೊಬ್ಬರ ವಿರುದ್ಧ ಲಂಚದ ಆರೋಪ ಕೇಳಿ ಬಂದ ಕೂಡಲೇ ಸ್ವಯಂ ಪ್ರೇರಣೆಯಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ದೆಹಲಿ ಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಶೇ 75 ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲಾಗಿದೆ.ಅದೇ ರೀತಿ ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ನಮ್ಮ ಗುರಿ ಎಂದರು.
ಸರ್ಕಾರಿ ಕಚೇರಿಗಳಲ್ಲಿ ಲಂಚದಿಂದಾಗಿ ಸಾಮಾನ್ಯ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಆಮ್ ಆದ್ಮಿ ಪಕ್ಷವು ಒಳ್ಳೆಯ ಕಾರ್ಯ ಹಮ್ಮಿಕೊಂಡಿದೆ. ಇದು ನಿರಂತರವಾಗಿ ನಡೆಯಬೇಕು.
●ಎಚ್.ಎಸ್.ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ
ಲಂಚಮುಕ್ತ ಬೆಂಗಳೂರು
ನಗರದಲ್ಲಿ ಅ.13ರಿಂದ 17ರವರೆಗೆ ಲಂಚಮುಕ್ತ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ. ಅ.17ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಅಭಿಯಾನ ನಡೆಯಲಿದೆ. ಅ.13 ಕೋರಮಂಗಲ, ಅ.14 ರಾಜಾಜಿನಗರ, ಅ.15 ಇಂದಿರಾನಗರ, ಅ.16 ಯಲಹಂಕ ಮತ್ತು ಅ.17ರಂದು ಜಯನಗರದ ಆರ್‍ಟಿಓ ಮತ್ತು ಸಬ್ ರಿಜಿಸ್ಟ್ರಾರ್ ಕಚೇರಿ ಎದುರು ಸಪ್ತಾಹದ ಅಂಗವಾಗಿ ಕಾರ್ಯಕ್ರಮ ನಡೆಯಲಿದೆ ಎಂದು ರವಿಕೃಷ್ಣಾ ರೆಡ್ಡಿ ಹೇಳಿದರು.