ಬೆಂಗಳೂರು: ಬಿಎಂಟಿಸಿ ಬಸ್ ಚಾಲಕ ಹಾಗೂ ಕಂಡಕ್ಟರ್‍ಗಳು ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ? ಬಸ್ ಡಿಪೊೀಗಳಲ್ಲಿ ಅಧಿಕಾರಿಗಳು ಅವರನ್ನು ಯಾವ ರೀತಿ ನಡೆಸಿಕೊಳ್ಳುತ್ತಾರೆ ಎನ್ನುವುದರ ಬಗ್ಗೆ ಹೆಡ್ ಸ್ಟಾರ್ಟ್ ಎಜುಕೇಷನಲ್ ಅಕಾಡೆಮಿ ವಿದ್ಯಾರ್ಥಿಗಳಿಂದ ನಡೆದ ಪ್ಲೇ ಇನ್ ಬಿಎಂಟಿಸಿ ಬಸ್ ಎನ್ನುವ ಕಿರು ನಾಟಕ ಈ ಬಾರಿಯ ಕಬ್ಬನ್ ಉದ್ಯಾನದ ವಿಶೇಷವಾಗಿತ್ತು.
ಪ್ರತಿ ಭಾನುವಾರ ಕಬ್ಬನ್‍ಪಾರ್ಕ್ ಒಳಗಡೆ ವಾಹನ ನಿಷೇಧಿಸಿರುವ ಹಿನ್ನೆಲೆ ಯಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಅದರ ಭಾಗವಾಗಿ ಇಂದು ನಾಟಕ, ನೃತ್ಯಗಳು ನಡೆದವು. ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು. ಇಂದಿನ ಪೀಳಿಗೆ ನೋಡಿರದ ಹಳೆಯ ಕಾರುಗಳ ಪ್ರದರ್ಶನ (ವಿಂಟೇಜ್ ಕಾರು) ಕೂಡ ಈ ವಾರದ ಆಕರ್ಷಣೆಯಾಗಿತ್ತು.
ಉದಯರಾಗದಲ್ಲಿ ನರೇಂದ್ರ ಕುಮಾರ್ ಮತ್ತು ತಂಡದಿಂದ ಭಕ್ತಿಗೀತೆ ಗಾಯನ ನಡೆಯಿತು. ಯೂನಿವರ್ಸ್ ಆರ್ಟ್ಸ್ ಫೌಂಡೇಷನ್ ನಿಂದ ಗುರು ಚಂದ್ರಿಕಾ ಮಹಾಪಾತ್ರ ಅವರಿಂದ ಒಡಿಸಿ ನೃತ್ಯ, ನಾಟ್ಯ ನಿನಾದ ನೃತ್ಯಾಲಯದಿಂದ ನೃತ್ಯ ಪ್ರದರ್ಶನ ಹಾಗೂ ದಿಯಾ ಉದಯ್ ಅವರಿಂದ ಭರತನಾಟ್ಯ ಬಹಳ ವಿಶಿಷ್ಟ ರೀತಿಯಲ್ಲಿ ಮೂಡಿಬಂತು.