ಜಿಲ್ಲಾ ಸುದ್ದಿ

ಶಿಕ್ಷಕರ ನೇಮಕ ವಿಳಂಬ: ಆಕ್ಷೇಪ

ಬೆಂಗಳೂರು: ಶಿಕ್ಷಕರ ನೇಮಕಾತಿಯಲ್ಲಿ ಶಿಕ್ಷಣ ಇಲಾಖೆ ತೋರುತ್ತಿರುವ ವಿಳಂಬ ಧೋರಣೆಗೆ ಅಭ್ಯರ್ಥಿಗಳು ಆಕ್ಷೇಪ ಎತ್ತಿದ್ದಾರೆ. ಈ ಸಂಬಂಧ ಶಿಕ್ಷಣ ಇಲಾಖೆಗೆ ಪತ್ರ ಬರೆದಿರುವ ಅಭ್ಯರ್ಥಿಗಳು ಅಸಮಾಧಾನ ತೋರ್ಪಡಿಸಿದ್ದಾರೆ.

9,511 ಶಿಕ್ಷಕರ ನೇಮಕಾತಿಗೆ ಮೇ ತಿಂಗಳಲ್ಲಿ ಪರೀಕ್ಷೆ ನಡೆದು, ಜುಲೈನಲ್ಲಿ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಕಾರ್ಯವೂ ಪೂರ್ಣಗೊಂಡಿದೆ. ಆಗಸ್ಟ್ ತಿಂಗಳಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು ಎಂದು ಈ ಹಿಂದೆ ಹೇಳಲಾಗಿತ್ತು. ಈ ಬಗ್ಗೆ ವಿಚಾರಿಸಿದರೆ, ನಮ್ಮ ಎಲ್ಲ ಪ್ರಕ್ರಿಯೆಗಳೂ ನಡೆದಿವೆ. ಅದೀಗ ಸಚಿವಾಲಯದ ಮಟ್ಟದಲ್ಲಿದೆ. ಅವರೇ ನಿರ್ಧಾರ ಕೈಗೊಳ್ಳಬೇಕಷ್ಟೆ ಎಂದು ವಿವರಿಸುತ್ತಾರೆ. ಆದರೆ, ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ತಡವಾಗಲು ಹೊರ ರಾಜ್ಯದ ಅಭ್ಯರ್ಥಿಗಳ ಆಯ್ಕೆಯಲ್ಲಿನ ಸಮಸ್ಯೆ ಕಾರಣ ಎಂದು ಹೇಳಲಾಗುತ್ತಿದೆ.

ಈ ಮಧ್ಯೆಯೇ, ಒಟ್ಟು 9,511 ಶಿಕ್ಷಕರ ಪೈಕಿ 2,511 ಶಿಕ್ಷಕರನ್ನು ಕಿರಿಯ ಪ್ರಾಥಮಿಕ ಶಾಲೆಗಳಿಗೆ (1ರಿಂದ 5ನೇ ತರಗತಿವರೆಗೆ) ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಹೊರ ರಾಜ್ಯಗಳಲ್ಲಿ ಟಿಇಟಿ ಬರೆದ 537 ಮಂದಿ ದಾಖಲಾತಿ ಪರಿಶೀಲನೆಗೆ ಹಾಜರಾಗಿದ್ದಾರೆ. ಇವರಲ್ಲಿ 294 ಅಭ್ಯರ್ಥಿಗಳು ಅರ್ಹತೆ ಹೊಂದಿಲ್ಲ ಎಂದು ರಾಜ್ಯದ ಅಭ್ಯರ್ಥಿಗಳು ಆರೋಪಿಸಿದ್ದಾರೆ. ಹಿರಿಯ ಪ್ರಾಥಮಿಕ ಶಾಲೆಗಳ (6ರಿಂದ 8ನೇ ತರಗತಿವರೆಗೆ) ವಿಭಾಗದಲ್ಲೂ ಇದೇ ಪರಿಸ್ಥಿತಿ ಇದೆ. ಕೇಂದ್ರ ದಾಖಲಾತಿ ಘಟಕದ ಮೂಲಕ 9,511 ಪ್ರಾಥಮಿಕ ಶಾಲಾ (ಕಿರಿಯ ಮತ್ತು ಹಿರಿಯ) ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು ಎರಡು ತಿಂಗಳ ಹಿಂದೆ ನಡೆಸಿರುವ ದಾಖಲೆಗಳ ಪರಿಶೀಲನೆಗೆ ಆಂಧ್ರ, ತಮಿಳುನಾಡು, ಕೇರಳ, ಮಹಾರಾಷ್ಟ್ರ ರಾಜ್ಯಗಳ ಟಿಇಟಿ ಮತ್ತು ಸಿಟಿಇಟಿಯಲ್ಲಿ ಅರ್ಹ ಅಂಕಗಳಿಸದ ಅಭ್ಯರ್ಥಿಗಳೂ ಹಾಜರಾಗಿದ್ದಾರೆ.ಅನರ್ಹರ ದಾಖಲೆಗಳನ್ನು ಪರಿಶೀಲಿಸುವ ಅಗತ್ಯವಾದರೂ ಏನಿತ್ತು ಎಂದು ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ.

ಶಿಕ್ಷಣ ಇಲಾಖೆ ಹೊರಡಿಸಿರುವ ನೇಮಕಾತಿ ಅಧಿಸೂಚನೆ ಪ್ರಕಾರ ಟಿಇಟಿಯಲ್ಲಿ 90 ಮತ್ತು 83 ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿರುವವರು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅರ್ಹರಲ್ಲ.. ರಾಜ್ಯದ ಟಿಇಟಿ ಅಭ್ಯರ್ಥಿಗಳ ಮಟ್ಟಿಗೆ ಈ ನಿಯಮ ಪಾಲನೆಯಾಗಿದೆ. ನಿಗದಿಗಿಂತ ಕಡಿಮೆ ಅಂಕಗಳಿಸಿರುವ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅನುಮತಿ ನೀಡಿಲ್ಲ. ಆದರೆ, ಸಿಟಿಇಟಿ ಮತ್ತು ಹೊರ ರಾಜ್ಯಗಳ ಟಿಇಟಿ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಬಂದಿರುವ ಅರ್ಜಿಗಳಲ್ಲಿ ಸಿಟಿಇಟಿ ಮತ್ತು ಇತರೆ ರಾಜ್ಯ ಟಿಇಟಿ ಅಭ್ಯರ್ಥಿಗಳು ಪಡೆದಿರುವ ಅಂಕಗಳನ್ನು ಪರಿಗಣಿಸುವ ಗೋಜಿಗೆ ಇಲಾಖೆ ಹೋಗಿಲ್ಲ. ಹಾಗಾಗಿ, ಅವರಿಗೂ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿದೆ ಎಂದು ಅಭ್ಯರ್ಥಿಗಳು ದೂರಿದರು. ಆಯ್ಕೆಯಾದ ಶಿಕ್ಷಕರ ತಾತ್ಕಾಲಿಕ ಪಟ್ಟಿ ಪ್ರಕಟಿಸುವಲ್ಲಿನ ವಿಳಂಬ ಇದೇ ವಿಷಯ ಕಾರಣ ಎಂದು ಹೇಳಲಾಗುತ್ತಿದೆಯಾದರೂ ಅಧಿಕಾರಿಗಳು ಖಚಿತವಾಗಿ ಇದನ್ನು ಸ್ಪಷ್ಟಪಡಿಸುತ್ತಿಲ್ಲ.

SCROLL FOR NEXT