ಜಿಲ್ಲಾ ಸುದ್ದಿ

ಸಿಎಂ ಪರಿಹಾರ ನಿಧಿಯಿಂದ ಹಣ ಪಡೆಯಲು ನಕಲಿ ದಾಖಲೆ: ದೂರು

Srinivas Rao BV

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಮುಖ್ಯಮಂತ್ರಿಗಳ ವೈದ್ಯಕೀಯ ಪರಿಹಾರ ನಿಧಿಯಿಂದ ಅಕ್ರಮ ಹಣಪಡೆಯಲು 14 ಮಂದಿ ಯತ್ನಿಸಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣ ಪತ್ತೆ ಹಚ್ಚಿರುವ ಮುಖ್ಯಮಂತ್ರಿಗಳ ಕಾರ್ಯಾಲಯ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ವೈದ್ಯಕೀಯ ವೆಚ್ಚಕ್ಕಾಗಿ ನೆರವು ಕೇಳಿ ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ವೈದ್ಯಕೀಯ ಪರಿಹಾರ ನಿಧಿ ಕಚೇರಿಗೆ ಕೆಲ ಅರ್ಜಿಗಳು ಬಂದಿದ್ದವು. 14 ಅರ್ಜಿಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ.
ಅನುಮಾನ ಬಂದ ಕಾರಣ ಮುಖ್ಯಮಂತ್ರಿಗಳ ಕಾರ್ಯಾಲಯದ ಅಧಿಕಾರಿಗಳು ಈ 14 ಅರ್ಜಿಗಳಿಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಿರುವ ಆಸ್ಪತ್ರೆಗಳು, ಔಷಧ ಖರೀದಿಗೆ ಬಿಲ್ ನೀಡಿರುವ ಔಷಧ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸಿಎಂ ಕಚೇರಿಗೆ ಬಂದಿರುವ ಎಲ್ಲಾ ಅರ್ಜಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಳ್ಳು ದಾಖಲೆ ನೀಡಿ ಪರಿಹಾರ ಪಡೆಯಲು ಹೊಂಚುಹಾಕುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ವೈದ್ಯಕೀಯ ಪರಿಹಾರ ಕೋರಿ ಅರ್ಜಿ ಸಲ್ಲಿಸಿರುವುದನ್ನು ಗಮನಿಸಿರುವ ಮುಖ್ಯಮಂತ್ರಿಗಳ ಕಾರ್ಯಾಲಯದ ಉಪಕಾರ್ಯದರ್ಶಿ ವಿಧಾನಸೌಧ ಪೊಲೀಸರಿಗೆ ದೂರು ನೀಡಿ ನಕಲಿ ದಾಖಲೆ ನೀಡಿರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಪೊಲೀಸರಿಗೆ ಸೂಚಿಸಿದ್ದಾರೆ. ಅಲ್ಲದೇ ಆ ಅರ್ಜಿಗಳಲ್ಲಿರುವ ಎಲ್ಲಾ ಹೆಸರುಗಳು ಸಹ ನಕಲಿ ಎಂಬುದು ತಿಳಿದುಬಂದಿದೆ.

SCROLL FOR NEXT