ಕೆ.ಆರ್.ಪುರ: ಕಾಡುಗೋಡಿಯ ರೈಲ್ವೆ ನಿಲ್ದಾಣದ ಬಳಿ ಕಾನೂನು ಬಾಹಿರವಾಗಿ ತೆರೆದಿರುವ ಮದ್ಯದ ಅಂಗಡಿ ಸ್ಥಳಾಂತರಿಸಲು ಒತ್ತಾಯಿಸಿ ಪ್ರತಿಭಟನೆ ನಡೆಯಿತು.
ಪಾಲಿಕೆ ಸದಸ್ಯ ಮುನಿಸ್ವಾಮಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮದ್ಯದ ಅಂಗಡಿಗೆ ಮುತ್ತಿಗೆ ಹಾಕಲಾಯಿತು. ಸಾಯಿಬಾಬ ಮಂದಿರ ಹಾಗೂ ರೈಲ್ವೆ ಠಾಣೆ ಸಮೀಪ ದೂರವಾಣಿ ವೈನ್ ಶಾಪ್ ನೂತನವಾಗಿ ಆರಂಭವಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದೆ. ಸದಸ್ಯ ಮುನಿಸ್ವಾಮಿ ಮಾತನಾಡಿ, ವೈನ್ ಶಾಪ್ ಅಥವಾ ಬಾರ್ ತೆರೆಯಲು ಸರ್ಕಾರ ಹಲವು ನಿಯಮಗಳನ್ನು ಪಾಲಿಸುವಂತೆ ಕಟ್ಟುನಿಟ್ಟಾಗಿ ಆದೇಶಿಸಿದ್ದರೂ, ವೈನ್ ಮಾಲೀಕರು ಕಾನೂನು ಉಲ್ಲಂಘಿಸಿ ಕಾಡುಗೋಡಿಯ ಪ್ರಸಿದ್ಧ ಸಾಯಿಬಾಬಾ ಆಶ್ರಮ ಹಾಗೂ ರೈಲ್ವೆ ನಿಲ್ದಾಣದ ಸಮೀಪ ವೈನ್ ಶಾಪ್ ತೆರೆದಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಹೀಗಾಗಿ ಅಂಗಡಿಯನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ಶಿಕ್ಷಣ ಸಂಸ್ಥೆಗಳು, ದೇವಾಲಯ ಹಾಗೂ ರೈಲ್ವೆ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳದಿಂದ ಕನಿಷ್ಠ 100 ಮೀ.ಅಂತರದಲ್ಲಿ ಮದ್ಯದ ಅಂಗಡಿ ತರೆಯಬೇಕೆಂಬ ನಿಯಮವಿದೆ. ಆದರೆ ನಿಯಮಗಳನ್ನು ಗಾಳಿಗೆ ತೂರಿ ನಿತ್ಯ ಸಾವಿರಾರು ಮಂದಿ ಸಂಚರಿಸುವ ಪ್ರದೇಶದಲ್ಲಿ ಅಂಗಡಿ ಆರಂಭಿಸಲಾಗಿದೆ ಎಂದು ಪ್ರತಿಭಟನಾ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಶಾಪ್ ಗೆ ಬೀಗ ಹಾಕಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದರು.