ಜಿಲ್ಲಾ ಸುದ್ದಿ

ಮಂಗಳೂರಿನಿಂದ ಜಲಮಾರ್ಗದ ರೋರೋ ಸೇವೆಗೆ ಚಾಲನೆ

Vishwanath S

ಪಣಂಬೂರು: ನವ ಮಂಗಳೂರು ಬಂದರಿನಲ್ಲಿ ಜಲಮಾರ್ಗದ ರೋರೋ ಸೇವೆಗೆ ಎನ್‌ಎಂಪಿಟಿ ಚೇರ್‌ಮನ್‌ ಪಿ.ಸಿ. ಪರಿದಾ ಚಾಲನೆ ನೀಡಿದರು.

ಪ್ಯೂರ್‌ ಕಾರ್‌ ಆ್ಯಂಡ್‌ ಟ್ರಕ್‌ ಕ್ಯಾರಿಯರ್‌ (ಪಿಸಿಟಿಸಿ) ಜಪಾನ್‌ ತಾಂತ್ರಿಕತೆಯಲ್ಲಿ ನಿರ್ಮಿಸಲಾಗಿದ್ದು, ಮರಿಯಾ ಇಂಡಿಯಾ ಹೆಸರಿನ ಬೃಹತ್‌ ನೌಕೆ ಲಾರಿಗಳನ್ನು ಹಾಗೂ ಕಾರುಗಳನ್ನು ಜಲಮಾರ್ಗದ ಮೂಲಕ ಸಾಗಿಸಲು ಸಿದ್ಧಗೊಂಡಿದೆ. ಮೊದಲ ಯಾನ ಎನ್‌ಎಂಪಿಟಿಯಿಂದ ಸೂರತ್‌ನ ಹಜಿರಾ ಬಂದರಿಗೆ ಕೈಗೊಳ್ಳಲಿದ್ದು ಕೇವಲ ಒಂದೂವರೆ ದಿನದಲ್ಲಿ ಕ್ರಮಿಸಲಿದೆ. ರಸ್ತೆ ಮೂಲಕ ಇದಕ್ಕೆ ನಾಲ್ಕು ದಿನಗಳು ಬೇಕಾಗುತ್ತವೆ. ಈಗಾಗಲೇ ಕೊಂಕಣ ರೈಲ್ವೇ ರೈಲು ಮೂಲಕ ರೋರೋ ಆರಂಭಿಸಿ ಯಶಸ್ವಿಯಾಗಿದ್ದು, ಇದೀಗ ಜಲಮಾರ್ಗದ ಮೂಲಕ ಇಂತಹ ಸೇವೆ ಒದಗಿಸಲು ದೇಶದ ಬಂದರುಗಳಿಗೆ ಕೇಂದ್ರದ ಭೂಸಾರಿಗೆ ಮತ್ತು ನೌಕಾಯಾನ ಇಲಾಖೆ ಅನುಮತಿ ನೀಡಿದೆ.

ಈ ಯೋಜನೆ ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ಆಂತರಿಕ ಪ್ರವಾಸೋದ್ಯಮ, ಸಮೀಪದ ಬಂದರುಗಳ ನಡುವೆ ಸರಕು ಸಾಗಾಟವೂ ಆರಂಭಗೊಳ್ಳಲಿದ್ದು ಈ ಯೋಜನೆಯ ಸದುಪಯೋಗವನ್ನು ಉದ್ಯಮಿಗಳು ಪಡೆದುಕೊಳ್ಳುವಂತೆ ಬಂದರಿನ ಚೇರ್‌ಮನ್‌ ಪಿ.ಸಿ. ಪರಿದಾ ಮನವಿ ಮಾಡಿಕೊಂಡಿದ್ದಾರೆ.

ಕೊಂಕಣ ರೈಲ್ವೇಯ ರೋರೋದಲ್ಲಿ 11 ಅಡಿ ಎತ್ತರದ ಲಾರಿಗಳನ್ನು ಮಾತ್ರ ಸಾಗಿಸಲು ಅವಕಾಶವಿದೆ. ಬೇರೆ ಕಡೆ ರೋರೋಗೆ ಆಸ್ಪದವಿಲ್ಲ. ಆದರೆ ಜಲ ಮಾರ್ಗದ ಮೂಲಕ ಈ ಬೃಹತ್‌ ನೌಕೆಯಲ್ಲಿ ಏಕಕಾಲಕ್ಕೆ 150 ಟ್ರಕ್‌ ಹಾಗೂ 200 ಕಾರುಗಳನ್ನು ಸಾಗಿಸಬಹುದಾಗಿದೆ. ಈ ಸಾರಿಗೆ ಯೋಜನೆಯಿಂದಾಗಿ ಸುಮಾರು 10,000 ರೂ.ಗಳಷ್ಟು ಟೋಲ್‌ ಹಣ ಟ್ರಕ್‌ ಮಾಲಕರಿಗೆ ಉಳಿತಾಯವಾಗುತ್ತದೆ. ನಿಗದಿತ ಸಮಯದಲ್ಲಿ ತಲುಪಲು ಸಾಧ್ಯವಾಗುವುದಲ್ಲದೆ ಟ್ರಾಫಿಕ್‌ ಕಿರಿಕಿರಿ, ಡೀಸೆಲ್‌ ನಷ್ಟವಾಗುವುದು ತಪ್ಪಲಿದೆ.

SCROLL FOR NEXT