ಜಿಲ್ಲಾ ಸುದ್ದಿ

ಕನ್ನಡದಲ್ಲೀಗ ಪುಸ್ತಕ ಸಮೃದ್ಧಿ: ಟಿ.ಎಸ್ ನಾಗಾಭರಣ

Shilpa D

ಬೆಂಗಳೂರು: ಪ್ರಸ್ತುತ ಕಾಲಘಟ್ಟದಲ್ಲಿ ಪ್ರಶ್ನೆಗಳೊಂದಿಗೆ ಬದುಕು ರೂಪಿಸಿಕೊಳ್ಳಬೇಕೆಂದು ಖ್ಯಾತ ನಿರ್ದೇಶಕ ಟಿ.ಎಸ್. ನಾಗಾಭರಣ ಹೇಳಿದರು.

ಪದ್ಮಾಲಯ ಪ್ರಕಾಶನ ಪ್ರಕಟಿಸಿರುವ ಶ್ರೀಧರ ರಾಯಸಂ ಅವರ `ಹಂಸಧ್ವನಿ' ಕಥಾ ಸಂಕಲನ ಕೃತಿಯನ್ನು ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಪುಸ್ತಕ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕೂಗಿದೆ. ಆದರೆ, ಪ್ರತಿ ದಿನ ಒಂದಲ್ಲಾ ಒಂದು ಕೃತಿಗಳು ಲೋಕಾರ್ಪಣೆಯಾಗುತ್ತಿದ್ದು, ಕನ್ನಡ ಸಾರಸ್ವತ ಲೋಕವನ್ನು ಸಮೃದ್ಧಿಗೊಳಿಸುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು. ಮನುಷ್ಯ ಸಂಘ ಜೀವಿ. ಸುಮ್ಮನಿರಲು ಸಾಧ್ಯವೇ ಇಲ್ಲ. ಒಂದಲ್ಲಾ ಒಂದು ವೃತ್ತಿ ಅಥವಾ ಪ್ರವೃತ್ತಿಯಲ್ಲಿ ತೊಡಗಿರುತ್ತಾನೆ. ವೃತ್ತಿಗೆ ನಿವೃತ್ತಿ ಇದೆ. ಆದರೆ ಪ್ರವೃತ್ತಿಗೆ ನಿವೃತ್ತಿ ಎಂಬುದಿಲ್ಲ.

ಇದು ಬದುಕಿನ ಕೊನೆ ಉಸಿರಿನವರೆಗೂ ಉಳಿಯುತ್ತದೆ. ಈ ನಿಟ್ಟಿನಲ್ಲಿ ಹಂಸಧ್ವನಿ ಕಥಾ ಸಂಕಲನದಲ್ಲಿರುವ ಒಂದೊಂದು ಕಥೆಗಳೂ ಸಾಕಾರಾತ್ಮಕ ಚಿಂತನೆಗಳ ಮೂಲಕ ಬದುಕಿನ ದರ್ಶನ ಮಾಡಿಸುತ್ತವೆ. ಸುಲಲಿತವಾಗಿ ಓದಿಸಿಕೊಳ್ಳುವ ಗುಣ ಹೊಂದಿವೆ ಎಂದು ಮೆಚ್ಚುಗೆ
ವ್ಯಕ್ತಪಡಿಸಿದರು. ಇಂದಿನ ಬದುಕು ರಾವಣ ಸಂಸ್ಕೃತಿಯತ್ತ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾಕಾರಾತ್ಮಕ ಆಲೋಚನಾ ಮನೋಭಾವ ಬೆಳೆಸಿಕೊಳ್ಳಬೇಕು.

ಕತ್ತಲೆಯಲ್ಲಿ ಕರಡಿ ಹುಡುಕುವ ಇಂದಿನ ಸಾಹಿತ್ಯದಲ್ಲಿ ಪಾರಭಾಷಿಕ ಶಬ್ದಗಳು ಕಡಿಮೆಯಾಗುತ್ತಿವೆ. ಈ ಕೃತಿ ಸಾಹಿತ್ಯಿಕ ಪಾರಿಭಾಷಿಕ ಪದಗಳಿಂದ ಕೂಡಿದ್ದು, ಕಥೆಗಾರರು ಹೊಸ ಶೈಲಿ ಮೈಗೂಡಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು. ಕವಿಯತ್ರಿ ಭಾಗ್ಯಲಕ್ಷ್ಮಿ ಮಗ್ಗೆ, ಹಾಸ್ಯ ಲೇಖಕ ಶ್ರೀನಿವಾಸ ಕುಂಡಂತ್ತಾಯ, ಕಥೆಗಾರ ಶ್ರೀಧರ ಮತ್ತಿತರು ಹಾಜರಿದ್ದರು.

SCROLL FOR NEXT