ಜಿಲ್ಲಾ ಸುದ್ದಿ

ಸಂಶೋಧಕ ಎಂಎಂ ಕಲಬುರ್ಗಿ ಹಂತಕನ ಹತ್ಯೆ?

Srinivasamurthy VN

ಬೆಳಗಾವಿ: ಹಿರಿಯ ಸಂಶೋಧಕ ಮತ್ತು ವಿಚಾರವಾದಿ ಎಂಎಂ ಕಲಬುರ್ಗಿ ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಬಿಡುಗಡೆ ಮಾಡಿದ್ದ ಶಂಕಿತ ವ್ಯಕ್ತಿಯ ರೇಖಾ ಚಿತ್ರವನ್ನು ಹೋಲುವ ವ್ಯಕ್ತಿಯ ಶವ ಪತ್ತೆಯಾಗಿದೆ.

ಬೆಳಗಾವಿಯ ಖಾನಾಪುರದಲ್ಲಿರುವ ಮಾನಸವಾಡಿ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಶಂಕಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಮೃತ ವ್ಯಕ್ತಿ ಯಾರೆಂದು ಈ ವರೆಗೂ  ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಪ್ರಸ್ತುತ ದೊರೆತಿರುವ ಶವವನ್ನು  ಕಳೆದ 10 ದಿನಗಳ ಹಿಂದೆಯೇ ತಂದು ಬಿಸಾಡಿ ಹೋಗಿರಬಹುದು ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬೆಳಗಾವಿ ಎಸ್ ಪಿ ರವಿಕಾಂತೇ ಗೌಡ ಅವರು, ಬೆಳಗಾವಿಯ ಖಾನಾಪುರ ಬಳಿಯ ಅರಣ್ಯ ಪ್ರದೇಶದಲ್ಲಿ ಅಪರಿಚತ ವ್ಯಕ್ತಿಯ ಶವ ಪತ್ತೆಯಾಗಿದೆ.  ಈ ಶವ ಸಂಶೋಧಕ ಕಲಬುರ್ಗಿ ಹತ್ಯೆ ಪ್ರಕರಣ ಸಂಬಂಧ ಬಿಡುಗಡೆಯಾಗಿದ್ದ ರೇಖಾಚಿತ್ರವನ್ನು ಹೋಲುತ್ತಿದೆ. ಆದರೆ ಮೃತ ವ್ಯಕ್ತಿ ಶಂಕಿತ ಹಂತಕನೆಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ಶವದ ಚಹರೆಯನ್ನು ಮತ್ತು ರೇಖಾಚಿತ್ರವನ್ನು ತಾಳೆ ಮಾಡಲು ತಜ್ಞರಿಗೆ ಸೂಚನೆ ನೀಡಲಾಗಿದೆ. ತನಿಖೆ ಮುಂದುವರೆದಿದ್ದು, ತನಿಖೆಯ ಬಳಿಕ ಸತ್ಯಾಂಶ ಹೊರಬೀಳಲಿದೆ ಎಂದು  ಹೇಳಿದ್ದಾರೆ.

ಹಿರಿಯ ಸಾಹಿತಿ ಮತ್ತು ಸಂಶೋಧಕ ಡಾ. ಎಂಎಂ ಕಲಬುರ್ಗಿ ಅವರನ್ನು ಕಳೆದ ಆಗಸ್ಟ್ 30ರಂದು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ತಮ್ಮ ವಿಚಾರವಾದಗಳಿಂದಲೇ  ಹಿಂದೂಪರ ಸಂಘಟನೆಗಳಿಂದ ಬೆದರಿಕೆ ಎದುರಿಸುತ್ತಿದ್ದ ಕಲಬುರ್ಗಿ ಅವರನ್ನು ಅವರ ಮನೆಯಲ್ಲಿಯೇ ಗುಂಡುಹಾರಿಸಿ ಕೊಲ್ಲಲಾಗಿತ್ತು. ಪ್ರಕರಣದ ತನಿಖೆಯನ್ನು ಸಿಒಡಿ ಅಧಿಕಾರಿಗಳು  ನಡೆಸುತ್ತಿದ್ದು, ಇತ್ತೀಚೆಗಷ್ಟೇ ಶಂಕಿತ ಹಂತಕನ ರೇಖಾ ಚಿತ್ರ ಬಿಡುಗಡೆಯಾಗಿತ್ತು. ಇದೀಗ ಬೆಳಗಾವಿಯಲ್ಲಿ ಶಂಕಿತ ಹಂತಕನ ರೇಖಾಚಿತ್ರ ಹೋಲುವ ವ್ಯಕ್ತಿ ಶವ ದೊರೆತಿರುವುದು ಹಲವು  ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

SCROLL FOR NEXT