ಜಿಲ್ಲಾ ಸುದ್ದಿ

ಸ್ಯಾನಿಟರಿ ಪ್ಯಾಡ್ ಕುರಿತು ಅರಿವು ಮೂಡಿಸಲು ಹಾಸ್ಟೆಲ್‍ಗಳತ್ತ ಬಿಜೆಪಿ

Shilpa D

ಬೆಂಗಳೂರು:ಸಿಲಿಕಾನ್ ಸಿಟಿಯ ರಸ್ತೆ ಕಸದ ರಾಶಿಯಲ್ಲಿ, ರಸ್ತೆ ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಕವರ್‍ನಲ್ಲಿ.. ಹೀಗೆ ಎಲ್ಲೆಂದರಲ್ಲಿ ಸ್ಯಾನಿಟರಿ ಪ್ಯಾಡ್ ಕಣ್ಣಿಗೆ ಬೀಳುತ್ತವೆ. ಕಾರಣ, ಅವುಗಳ ವಿಸರ್ಜನೆ ಬಗ್ಗೆ ಮಹಿಳೆಯರಲ್ಲಿ ಇರುವ ಅರಿವಿನ ಕೊರತೆ. ಇಂದು ಬಹುತೇಕ ಮಹಿಳೆಯರು ಈ ಸಾನಿಟರಿ ಪ್ಯಾಡ್‍ಗಳನ್ನು ಬಳಸುತ್ತಾರೆ. ಆದರೆ, ಅದನ್ನು ಬಳಸಿದ ನಂತರ ವಿಲೇವಾರಿ ಹೇಗೆ ಎಂಬುದು ಮಾತ್ರ ಶೇ.99ರಷ್ಟು ಮಹಿಳೆಯರಿಗೆ
ತಿಳಿದಿಲ್ಲ. ಹಾಗಾಗಿಯೇ ಕಂಡಕಂಡಲ್ಲಿ ಇವು ಕಾಣಿಸುತ್ತವೆ. ಇದರ ಬಗ್ಗೆ ಎಷ್ಟೇ ಅರಿವು ಮೂಡಿಸಲು ಮುಂದಾದರೂ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಈಗ ಆ ಕೆಲಸಕ್ಕೆ ಬಿಜೆಪಿ ಮಹಿಳಾ ಯುವಮೋರ್ಚಾ ಮುಂದಾಗಿದೆ, ಸ್ಯಾನಿಟರಿ ನ್ಯಾಪ್ಕಿನ್  ವಿಲೇವಾರಿ ಬಗ್ಗೆ ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸಲು ಅಭಿಯಾನ ಆರಂಭಿಸಿದೆ. ಬುಧವಾರ ಮಹಾರಾಣಿ ಕಾಲೇಜಿನ ಹಾಸ್ಟೆಲ್ ನಲ್ಲಿ `ಸ್ಯಾನಿಟರಿ ಪ್ಯಾಡ್ ಬರ್ನಿಂಗ್ ಮಷಿನ್ 'ನನ್ನು ಅಳವಡಿಸುವ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಸ್ವಚ್ಛತಾ ಕಾರ್ಯಕ್ರಮ: ಸ್ವಾಮಿ ವಿವೇಕಾನಂದರ ಶಿಷ್ಯೆ ಸಿಸ್ಟರ್ ನಿವೇದಿತಾ ಅವರ 148ನೇ ಜಯಂತಿ ಅಂಗವಾಗಿ ಈ ಸ್ವಚ್ಛತಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕ ಸುರೇಶ್ ಕುಮಾರ್ ಅವರು, ಹಾಸ್ಟೆಲ್‍ನ ಮುಂಭಾಗ ಕಸ ಗುಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವಿಜಯಾ ರಾಹಟೆಕರ್ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಮೋದಿ ಅವರ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ತಾವು ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ರಾಜ್ಯದ 821 ಹಿಂದುಳಿದ ಹಾಸ್ಟೆಲ್ ಗಳ ಸ್ಥಿತಿಗತಿ ಅಧ್ಯಯನ ಮಾಡಿದ್ದು ಅಲ್ಲಿ ಪ್ಯಾಡ್ ಸುಡುವ ಯಂತ್ರ ಅಳವಡಿಸಲಾಗಿದೆ. ಮಹಾರಾಣಿ ಕಾಲೇಜಿನ ಆವರಣದಲ್ಲಿ ಅಳವಡಿಸಿರುವ ಎರಡು ಯಂತ್ರಗಳನ್ನು ಜೆಪಿ ಕಂಪನಿಯವರು ದಾನ ಮಾಡಿದ್ದಾರೆ ಎಂದರು..

ಮನೆಯಲ್ಲೂ ಬಳಸಬಹುದು: ಈ ಯಂತ್ರವನ್ನು ಮನೆಯಲ್ಲೂ ಬಳಸಬಹುದು. 5 ಪ್ಯಾಡ್‍ನಿಂದ 50, 100, 200 ಹೀಗೆ ಎಷ್ಟು ಪ್ಯಾಡ್ ಬೇಕಾದರೂ ಸುಡುವ 4 ವಿಧದ ಮಷಿನ್ ಮಾರುಕಟ್ಟೆಯಲ್ಲಿ ಲಭ್ಯ. ಸ್ಯಾಂಡಸ್ ಮಿನಿ (5 ಪ್ಯಾಡ್‍ಗೆ), ಸ್ಯಾಂಡಸ್ 50 (50 ಪ್ಯಾಡ್‍ಗೆ), ಸ್ಯಾಂಡಸ್ 100 (100 ಪ್ಯಾಡ್ ಗೆ), ಸ್ಯಾಂಡಸ್ 200 (200 ಪ್ಯಾಡ್‍ಗೆ) ಎಂಬ ಯಂತ್ರಗಳಿದ್ದು, ಅದನ್ನು ಬಳಸಿ ಪ್ಯಾಡ್ ಸುಡಬಹುದು. ಇದರ ದರ jರೂ.15 ಸಾವಿರದಿಂದ (ಸಣ್ಣ ಮಷಿನ್‍ಗೆ) ಆರಂಭ. ಪ್ಯಾಡ್ ಸುಟ್ಟ ನಂತರ ಯಂತ್ರ ತಂತಾನೇ  ಆಫ್ ಆಗುತ್ತದೆ.

ಪರಿಸರ ಸ್ನೇಹಿ ಅಲ್ಲ: ಪ್ಯಾಡ್ ಸುಡುವ ಬಗ್ಗೆ ಪ್ರತಿಕ್ರಿಯಿಸಿರುವ ಹಾಟ್‍ಸ್ಪ್ರಿಂಗ್ಸ್‍ನ ಮುಖ್ಯಸ್ಥೆ ಶ್ರೀವಿದ್ಯಾ ರಾಜೇಂದ್ರನ್, ಈ ಯಂತ್ರ ಪರಿಸರ ಸ್ನೇಹಿ ಅಲ್ಲ. ಆದರೆ, ಈ ಪ್ಯಾಡ್ ಹಾಗೆಯೇ ಎಸೆಯುವುದಕ್ಕಿಂತ ಸುಟ್ಟರೆ ಹಾನಿ ಪ್ರಮಾಣ ತಗ್ಗುತ್ತದೆ. ದೊಡ್ಡ ಯಂತ್ರಗಳನ್ನು
ಮನೆಯಲ್ಲಿ ಬಳಸಲು ಸಾಧ್ಯವಿಲ್ಲ. ಹಾಗಾಗಿ ಮನೆಯಲ್ಲಿ ಬಳಸಲು ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಣ್ಣ ಯಂತ್ರ ತಯಾರಿಸುತ್ತಿದ್ದು, ಅದು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದೆ ಎಂದರು.
 
ವಿಸರ್ಜನೆ ಹೇಗೆ?
ಈ ಯಂತ್ರ ವಿದ್ಯುತ್‍ನಿಂದ ಕೆಲಸ ನಿರ್ವಹಿಸುತ್ತದೆ. ಪ್ಯಾಡ್ ಬಳಸಿದ ನಂತರ ಅದನ್ನು ಯಂತ್ರಕ್ಕೆ ಹಾಕುವ 30 ನಿಮಿಷ ಮುನ್ನ ಅದರ ಸ್ವಿಚ್ ಆನ್ ಮಾಡಬೇಕು. ನಂತರ ಪ್ಯಾಡ್‍ಗಳನ್ನು ಅದರೊಳಗೆ ಹಾಕಿ ಬಾಗಿಲು ಮುಚ್ಚಿ ಯಂತ್ರದಲ್ಲಿನ ಕೆಂಪು ಬಟನ್ ಒತ್ತಿದರೆ ಸುಮಾರು 15 ನಿಮಿಷದಲ್ಲಿ ಅದು ಸುಟ್ಟುಹೋಗುತ್ತದೆ. ಅದರ ಹೊಗೆ ಹೋಗಲು ಪ್ರತ್ಯೇಕ ಕೊಳವೆ ಇರುತ್ತದೆ. ಆ ಕೊಳವೆ ಮುಖಾಂತರ ಕೆಟ್ಟ ಹೊಗೆ ಹೊರಹೋಗುತ್ತದೆ. ನಂತರ ಟ್ರೇಯಲ್ಲಿ ಬೂದಿ ಉಳಿಯುತ್ತದೆ. ಆ ಬೂದಿ ಸಹ ಯೋಗ್ಯವಲ್ಲ ಹಾಗಾಗಿ ಅದನ್ನು ಶೌಚಾಲಯ/ ಕಸದಲ್ಲಿ ಹಾಕಬೇಕು.

SCROLL FOR NEXT