ಮಡಿಕೇರಿ: ಗೋಮಾಂಸ ಭಕ್ಷಣೆ ಕುರಿತಂತೆ ನೀಡಿರುವ ಹೇಳಿಕೆ ಮುಂದಿಟ್ಟುಕೊಂಡು ಬಿಜೆಪಿ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಮುಗಿಬಿದ್ದಿದ್ದಾರೆ. ಸಿಎಂ ರಾಜಿನಾಮೆಗೆ ಆಗ್ರಹಿಸಿರುವ ಪಕ್ಷ, ಹೇಳಿಕೆ ಖಂಡಿಸಿ ಸೋಮವಾರ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಪುತ್ರನ ಮದುವೆಗೆ ಕುಶಾಲನಗರಕ್ಕೆ ಆಗಮಿ ಸಿದ್ದ ಪಕ್ಷದ ಮುಖಂಡರು ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಸಿಎಂ ವಿರುದ್ಧ ಕಿಡಿಕಾರಿದರು. ತಾನೂ ಗೋಮಾಂಸ ಭಕ್ಷಿಸುವುದಾಗಿ ಹೇಳಿಕೆ ನೀಡುವ ಮೂಲಕ ಸಿಎಂ ಸಿದ್ದರಾಮಯ್ಯ ವಿವೇಚನಾರಹಿತರಾಗಿ ಮಾತನಾಡಿದ್ದಾರೆ. ತಮ್ಮ ಸ್ಥಾನದ ಘನತೆಗೆ ಚ್ಯುತಿ ತಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಟೀಕಿಸಿದರೆ, ನಿಮ್ಮ ಪಾಡಿಗೆ ನೀವು ಗೋಮಾಂಸ ತಿನ್ನುತ್ತಿರಿ, ರಾಜ್ಯದ ಜನ ಪಾಠ ಕಲಿಸುತ್ತಾರೆ ಎಂದು ಸಂಸದ
ಯಡಿಯೂರಪ್ಪ ವ್ಯಂಗ್ಯವಾಡಿದರು.
04 ಗೋಮಾಂಸ ಪೌಷ್ಟಿಕ ಆಹಾರ ಎಂಬ ಲೇಖನ ಪ್ರಕಟಿಸಿದ ಸಂಪಾದಕ ವಿಧಾನಸಭೆಯ ಪ್ರತಿಪಕ್ಷ ನಾಯಕ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಮಾತನಾಡಿ, ಬಿಜೆಪಿ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧ ಕಾಯಿದೆಯನ್ನೇ ರದ್ದುಗೊಳಿಸಿದ ಕಾಂಗ್ರೆಸ್ ಸರ್ಕಾರ ಇದೀಗ ಹಿಂದೂಗಳ ನಂಬಿಕೆಗೆ ಧಕ್ಕೆ ತರುವ ರೀತಿಯಲ್ಲಿ ಗೋಹತ್ಯೆಗೆ ಪ್ರೇರಣೆ ನೀಡುವ ಹೇಳಿಕೆ ಮೂಲಕ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದೆ ಎಂದು ಟೀಕಿಸಿದರು.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು, ಸೋನಿಯಾ ಗಾಂಧಿ ಅವರನ್ನು ಓಲೈಸಲು ಸಿದ್ದರಾಮಯ್ಯ ಗೋಮಾಂಸ ತಿನ್ನುವ ಹೇಳಿಕೆ ನೀಡಿದ್ದಾರೆ. ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿ ಮಾತನಾಡಿರುವ ಅವರು ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆಯಬೇಕೆಂದು ಆಗ್ರಸಿದ್ದಾರೆ.
ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ, ಸಿಎಂ ಹಂದಿ ಮಾಂಸವನ್ನೂ ತಿನ್ನಲಿ, ಅವರನ್ನು ತಡೆಯೋರ್ಯಾರು? ಆದರೆ ಸಿದ್ದರಾಮಯ್ಯರಿಗೆ ಗೋಮಾಂಸ ಜಗಿಯುವ ಖಯಾಲಿ ಅಧಿಕಾರಕ್ಕೆ ಮುನ್ನ ಬಾರದೆ ಮುಖ್ಯಮಂತ್ರಿಯಾದ ಮೇಲೆ ಯಾಕೆ ಬಂತು. ಹಿಂದುಗಳನ್ನು ಅಪಮಾನ ಮಾಡುವ ಉದ್ದೇಶದಿಂದಲೇ ಇಂತಹ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ವಿಜಯಪುರದಲ್ಲಿ ಹೇಳಿಕೆ ನೀಡಿದರು.