ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿದ್ಯುತ್ ಅಭಾವ ಪರಿಸ್ಥಿತಿ ಇನ್ನಷ್ಟು ಉಲ್ಬಣಿಸಿದ್ದು, ನಗರದಲ್ಲಿ ಲೋಡ್ ಶೆಡ್ಡಿಂಗ್ ಅವಧಿಯನ್ನು 3ರಿಂದ 4 ಗಂಟೆಗೆ ವಿಸ್ತರಿಸಲಾಗಿದೆ.
ಕಳೆದ ವಾರ ಬೆಂಗಳೂರು ನಗರ ವ್ಯಾಪ್ತಿಯ ಪ್ರದೇಶದಲ್ಲಿ ಮೂರು ಗಂಟೆ ವಿದ್ಯುತ್ ಕಡಿತ ಮಾಡುವುದಕ್ಕೆ ಬೆಸ್ಕಾಂ ನಿರ್ಧರಿಸಿತ್ತು. ಆದರೆ ಬುಧವಾರ ಬೆಂಗಳೂರು ನಗರದ ಆದ್ಯತೆ ಮತ್ತು ಪೂರೈಕೆಯಲ್ಲಿ ತೀವ್ರ ವ್ಯತ್ಯಾಸ ಕಂಡು ಬಂದಿರುವ ಹಿನ್ನೆಲೆಯಲ್ಲಿ ಲೋಡ್ ಶೆಡ್ಡಿಂಗ್ ಅವಧಿ ಪರಿಷ್ಕರಿಸಲಾಗಿದೆ.
ವಸತಿ ಪ್ರದೇಶಗಳಿಗೆ ನಾಲ್ಕು ಗಂಟೆ, ವಾಣಿಜ್ಯ ಉದ್ದೇಶಕ್ಕೆ ಎರಡು ಗಂಟೆ ಹಾಗೂ ಕೈಗಾರಿಕಾ ಬಳಕೆಗೆ ಎರಡು ಗಂಟೆ ಪ್ರತಿ ದಿನ ಲೋಡ್ ಶೆಡ್ಡಿಂಗ್ ಮಾಡಲು ನಿರ್ಧರಿಸಲಾಗಿದೆ. ಆದರೆ ಅವಶ್ಯ ಸೇವೆಗಳಾದ ನೀರು ಪೂರೈಕೆ, ವಿಮಾನ ನಿಲ್ದಾಣ, ರೈಲು, ಆಸ್ಪತ್ರೆ ಮೊದಲಾದವುಗಳಿಗೆ ತೊಂದರೆಯಾಗದಂತೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲು ನಿರ್ಧರಿಸಲಾಗಿದೆ.