ಬೆಂಗಳೂರು: ಹೆಸರಾಂತ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಅವರನ್ನು ವೃತ್ತಿಪರ ಹಂತಕರೇ ಹತ್ಯೆ ಮಾಡಿರುವ ಸಾಧ್ಯತೆಗಳಿರುವುದರಿಂದ ಅವರ ಪತ್ತೆಗೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಮಂಗಳವಾರ ಹೇಳಿದರು.
ವಿಧಾನಸೌಧದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು ಕಲಬುರ್ಗಿ ಹತ್ಯೆ ಕುರಿತು ಸಿಐಡಿ ತನಿಖೆ ನಡೆಯುತ್ತಿದೆ, ಷ್ಕರ್ಮಿಗಳ ಪತ್ತೆಗೆ ಪ್ರಯತ್ನ ನಡೆಯುತ್ತಿದೆ. ವೃತ್ತಿಪರರಿಂದಲೇ ಈ ಕೃತ್ಯ ನಡೆದಿರುವುದರಿಂದ ತುಸು ಸಮಯ ಬೇಕಾಗುತ್ತದೆ. ಪೊಲೀಸರ ಕೆಲಸದ ಬಗ್ಗೆ ತಮಗೆ ವಿಶ್ವಾಸವಿದೆ, ಸದ್ಯದಲ್ಲಿಯೇ ಆರೋಪಿಗಳನ್ನು ಪತ್ತೆ ಹಚ್ಚಲಿದ್ದಾರೆ ಎಂದರು.
ಗೋವಿಂದರಾವ್ ಪಾನ್ಸರೆ ಕೊಲೆಯಂತೆಯೇ ಡಾ.ಕಲಬುರ್ಗಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವುದು ಬೇಡ, ಸ್ಥಳೀಯ ಪೊಲೀಸರಿಂದಲೇ ತನಿಖೆ ನಡೆಸಿ ಎಂದು ಪಾನ್ಸರೆ ಸೊಸೆ ಮೇಘನಾ ಪಾನ್ಸರೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಸದ್ಯ ಸಿಐಡಿ ತನಿಖೆ ನಡೆಯುತ್ತಿದೆ, ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದು ಮುಖ್ಯಮಂತ್ರಿ ಅವರಿಗೆ ಬಿಟ್ಟ ವಿಷಯ. ಇಂಥ ಪ್ರಕರಣಗಳ ಬಗ್ಗೆ ತನಿಖೆ ನಡೆಸುವ ಶಕ್ತಿ ನಮ್ಮ ಪೊಲೀಸರಿಗೆ ಇದೆ ಎಂದು ಅಭಿಪ್ರಾಯಪಟ್ಟರು.
ಕಲಬುರ್ಗಿ ಅವರ ಹತ್ಯೆ ನಮಗೂ ನೋವು ತಂದಿದೆ. ಆದರೆ ಡಾ.ಚಂದ್ರಶೇಖರ ಪಾಟೀಲರು ಪಂಪ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸುವ ಅವಶ್ಯಕತೆ ಇರಲಿಲ್ಲ, ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆ ಕೊಡಿಸುವ ವಿಷಯದಲ್ಲಿ ಸರ್ಕಾರ ಬದ್ಧ ಎಂದು ಸ್ಪಷ್ಟಪಡಿಸಿದರು.