ಜರಗನಹಳ್ಳಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ...
ಬೆಂಗಳೂರು: ನಗರದ ದಕ್ಷಿಣ ಭಾಗದಲ್ಲಿ ಮಾಡಲಾಗಿದ್ದ ಸರ್ಕಾರಿ ಭೂಮಿ ಒತ್ತುವರಿಯನ್ನು ಮಂಗಳವಾರ ತೆರವುಗೊಳಿಸಲಾಗಿದ್ದು, ಸುಮಾರು ರು.850 ಕೋಟಿ ಮೌಲ್ಯದ ಭೂಮಿಯನ್ನು ವಶಕ್ಕೆ ಪಡೆಯಲಾಗಿದೆ.
ಜಯನಗರ ಬಳಿಯ ಭೈರಸಂದ್ರ ಮತ್ತು ಕನಕಪುರ ರಸ್ತೆಯಲ್ಲಿರುವ ಜರಗನಳ್ಳಿಯಲ್ಲಿ ಒತ್ತುವರಿಯಾಗಿದ್ದ ಭೂಮಿಯನ್ನು ಇಂದು ವಶಪಡಿಸಿಕೊಳ್ಳಲಾಗಿದೆ.
ಜಯನಗರ ಬಳಿಯ ಭೇರಸಂದ್ರದಲ್ಲಿ ಸರ್ವೆ ನಂ.89/6ರಲ್ಲಿರುವ 5.39 ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಲಾಗಿತ್ತು , ಇದು ಸುಮಾರು ರು.300 ಕೋಟಿ ಮೌಲ್ಯದ ಸರ್ಕಾರಿ ಜಾಗವಾಗಿದೆ. ಬೆಂಗಳೂರಿನ ಭೈರಸಂದ್ರದಲ್ಲಿ ವಾಸವಾಗಿರುವ ಲಕ್ಷ್ಮಮ್ಮ ಮತ್ತು ಡಿಎಸ್ ಆರ್ ಪ್ರಾಜೆಕ್ಟ್ ಕಂಪನಿಯಿಂದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರು.
ಸರ್ಕಾರಿ ಭೂಮಿಗೆ ಬಿಬಿಎಂಪಿ ಕಾಂಪೌಂಡ್ ನಿರ್ಮಿಸಿತ್ತು. ಇದಕ್ಕೆ ಅಕ್ರಮವಾಗಿ ಗೇಟ್ ಹಾಕಿದ್ದ ಲಕ್ಷ್ಮಮ್ಮ, ಬೀಗ ಹಾಕಿದ್ದರು. ಅಕ್ರಮವಾಗಿ ಹಾಕಲಾಗಿದ್ದ ಬೀಗವನ್ನು ಕಂದಾಯ ಅಧಿಕಾರಿಗಳು ಒಡಿದು ಹಾಕಿದ್ದಾರೆ. ಈ ವೇಳೆ ಅಧಿಕಾರಿಗಳೊಂದಿಗೆ ಲಕ್ಷ್ಮಮ್ಮ ಮತ್ತು ಕಂಪನಿ ಸಿಬ್ಬಂದಿ ವಾಗ್ಧಾಳಿ ನಡೆಸಿದ್ದಾರೆ.
ಇನ್ನು ಕನಕಪುರ ರಸ್ತೆಯಲ್ಲಿನ ಜರಗನಹಳ್ಳಿಯಲ್ಲಿರುವ ಟೆಂಪಲ್ ಟ್ರೀ ಅಪಾರ್ಟ್ ಮೆಂಟ್ ಬಳಿ ಸುಮಾರು 2.25 ಎಕರೆ ಭೂ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಗೋಪಾಲನ್ ಎಂಟರ್ ಪ್ರೈಸಸ್ ಕಂಪನಿ 2.25 ಎಕರೆ ಜಾಗದಲ್ಲಿ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿತ್ತು. ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ ಶಂಕರ್ , ಉಪವಿಭಾಗಧೀಕಾರಿ ಎಸಿ ನಾಗರಾಜ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದ್ದು, ರು.200 ಕೋಟಿ ಮೌಲ್ಯದ ಸರ್ಕಾರಿ ಭೂಮಿ ಮರುವಶ ಪಡೆಯಲಾಗಿದೆ.