ಜಿಲ್ಲಾ ಸುದ್ದಿ

ಅಮೆರಿಕಾಗೆ ಮಾನವ ಕಳ್ಳಸಾಗಾಣೆ ಮಾಡುತ್ತಿದ್ದ ಜಾಲ ಪತ್ತೆ

Vishwanath S

ಬೆಂಗಳೂರು: ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಅಮೆರಿಕಾದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರಿಗೆ ಇಲ್ಲಿರುವ ಮಕ್ಕಳನ್ನು ಪಾಸ್‍ಪೋರ್ಟ್ ವೀಸಾ ಇನ್ನಿತರ ದಾಖಲಾತಿಗಳ ಮೂಲಕ ಕಳ್ಳಸಾಗಾಣೆ ಮಾಡುತ್ತಿದ್ದ ಜಾಲವನ್ನು ನಗರ ಪೊಲೀಸರು ಬೇಧಿಸಿದ್ದಾರೆ.

ಅಕ್ರಮ ಕಳ್ಳಸಾಗಾಣೆ ಜಾಲದಲ್ಲಿ ತೊಡಗಿದ್ದ ಪ್ರಮುಖ ಆರೋಪಿ ಸೇರಿ 16 ಮಂದಿಯನ್ನು ಬಂಧಿಸಲಾಗಿದ್ದು ಇಲ್ಲಿಯವರೆಗೆ ಗುಜರಾತ್ ಪಂಜಾಬ್‍ನಿಂದ 25 ರಿಂದ 30 ಮಂದಿ ಮಕ್ಕಳನ್ನು ಕಳುಹಿಸಿರುವ ಮಾಹಿತಿಯಿದ್ದು ಅವರೆಲ್ಲರೂ ಅಮೆರಿಕಾದಲ್ಲಿ ಅಕ್ರಮವಾಗಿ ನೆಲೆಸಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಹರಿಶೇಖರನ್ ತಿಳಿಸಿದ್ದಾರೆ.

ಜಯಮಹಲ್‍ನ ಉದಯ್ ಪ್ರತಾಪ್‍ಸಿಂಗ್(37) ಹೊರಮಾವುವಿನ ಪವಿನ್(43) ಮಿಚೆಲ್(37) ಸಹಕಾರನಗರದ ರಾಜೇಶ್(43) ಆರ್ ಟಿ ನಗರದ ಸಿಮನ್(36) ಕುಶಾಲಪ್ಪ(34) ಬಾಣಸವಾಡಿಯ ಗುಣಶೇಖರ್(42) ಕೊತ್ತನೂರಿನ ಅರುಳ್‍ಕುಮಾರ್(46) ಬೊಮ್ಮನಹಳ್ಳಿಯ ಜಾಯಿಸನ್(37) ಮಹಾಲಕ್ಷ್ಮೀಪುರಂನ ಮಂಜುನಾಥ(37) ಕಮ್ಮನಹಳ್ಳಿಯ ಫ್ರಾನ್ಸಿಸ್(34) ಹೆಚ್‍ಎಎಲ್‍ನ ಲತಾವೇಮರೆಡ್ಡಿ(34) ಸಂಗೀತ ಪ್ರಕಾಶ್, ಸುಧೀರ್ ಕುಮಾರ್, ಭಾನುಪ್ರಕಾಶ್, ವೀಣಾ ಪ್ರಕಾಶ್, ಸಂಗೀತ ಪ್ರಕಾಶ್ ಬಂಧಿತ ಆರೋಪಿಗಳಾಗಿದ್ದಾರೆ.

ಮೊದಲಿಗೆ ಅಕ್ರಮವಾಸಿಗಳ ಮಕ್ಕಳನ್ನು ನಗರಕ್ಕೆ ಕರೆತಂದು ಅವರಿಗೆ ಒಂದೂವರೆ ತಿಂಗಳ ತರಬೇತಿ ನೀಡಿ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಅವುಗಳನ್ನು ನೀಡಿ ಪಾಸ್‍ಪೋರ್ಟ್ ವೀಸಾ ಪಡೆದು ನಕಲಿ ತಂದೆ ತಾಯಿಗಳೊಂದಿಗೆ ಅಮೆರಿಕಾಕ್ಕೆ ಕಳುಹಿಸಿ ಅಲ್ಲಿನ ನಿಜವಾದ ಅಕ್ರಮವಾಸಿ ತಂದೆ ತಾಯಿಗಳಿಗೆ ಒಪ್ಪಿಸಿ ವಾಪಸಾಗುತ್ತಿದ್ದರು.

ಇಂತಹ ಜಾಲ ನಗರದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಮಾಹಿತಿ ಬಂದ ತಕ್ಷಣ 14 ವಿಶೇಷ ತಂಡಗಳನ್ನು ರಚಿಸಿ ಪಾಸ್‍ಪೋರ್ಟ್ ವೀಸಾ ಕಚೇರಿಗಳು ಬಿಬಿಎಂಪಿ ಇನ್ನಿತರ ಇಲಾಖೆಗಳಿಂದ ಮಾಹಿತಿ ಪಡೆದುಕೊಂಡು ಸತತ 1 ವರ್ಷ ಕಾರ್ಯಾಚರಣೆ ನಡೆಸಿದ ನಂತರ ಜಾಲಪತ್ತೆಯಾಗಿದೆ.

SCROLL FOR NEXT