ಜಿಲ್ಲಾ ಸುದ್ದಿ

4 ಸಾವಿರ ಇಂಗ್ಲಿಷ್‌ ಶಿಕ್ಷಕರ ಭವಿಷ್ಯ ಅತಂತ್ರ?

Sumana Upadhyaya

ಬೆಂಗಳೂರು: ಡಿಗ್ರಿಯಲ್ಲಿ ಇಂಗ್ಲಿಷ್ ಸಾಹಿತ್ಯ ವಿಷಯವನ್ನು ಅಧ್ಯಯನ ಮಾಡಿದವರು ಮಾತ್ರ  ಹೈಸ್ಕೂಲ್ ಇಂಗ್ಲಿಷ್‌ ಶಿಕ್ಷಕರಾಗಲು ಅರ್ಹರು ಎಂಬ ಹೈಕೋರ್ಟ್‌ ಆದೇಶದಿಂದಾಗಿ ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಸುಮಾರು 4 ಸಾವಿರ ಸಹಾಯಕ ಶಿಕ್ಷಕರ ಪರಿಸ್ಥಿತಿ ಅತಂತ್ರವಾಗಿದೆ. 1993-94ರಲ್ಲಿ ಡಿಪ್ಲೊಮಾ ಕೋರ್ಸ್ ನ್ನು ಮಾಡಿ ನೇಮಕಗೊಂಡ ಶಿಕ್ಷಕರನ್ನು ತೆಗೆದುಹಾಕುವಂತೆ ರಾಜ್ಯ ಸರ್ಕಾರ ಇತ್ತೀಚೆಗೆ ಕಳೆದ ವರ್ಷ ಆದೇಶ ನೀಡಿತ್ತು.

ಕಳೆದ ವರ್ಷ ಜುಲೈ 30ರಂದು ಹೈಕೋರ್ಟ್ ಮತ್ತು ಧಾರವಾಡ ವಿಭಾಗೀಯ ಪೀಠ ಆದೇಶವೊಂದನ್ನು ಜಾರಿಗೆ ತಂದಿತ್ತು. ಅದು ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳ ನಿಯಮ 2002ರಲ್ಲಿ ಡಿಪ್ಲೊಮಾ ಪದವೀಧರರನ್ನು ಶಿಕ್ಷಕರಾಗಿ ನೇಮಿಸಿಕೊಳ್ಳಲು ಜಾರಿಗೆ ತಂದಿದ್ದ ಆದೇಶವನ್ನು ರದ್ದುಗೊಳಿಸಿತ್ತು. ಇಂಗ್ಲಿಷ್ ಭಾಷಾ ಶಿಕ್ಷಕರಾಗಲು ಇಂಗ್ಲಿಷ್ ಸಾಹಿತ್ಯವನ್ನು ಕಡ್ಡಾಯವಾಗಿ ಓದಿರಬೇಕೆಂದು ಅದು ಹೇಳಿದೆ.

ಈ ನಿಟ್ಟಿನಲ್ಲಿ ಒಂಬತ್ತು ತಿಂಗಳ ಕೋರ್ಸ್‌ ಮುಗಿಸಿ ಆಂಗ್ಲ ಶಿಕ್ಷಕರಾಗಿ ನೇಮಕಗೊಂಡವರಿಗೆ ಮೇಜರ್‌ ಇಂಗ್ಲಿಷ್‌ ಕೋರ್ಸ್‌ ಪೂರ್ಣಗೊಳಿಸಲು ಅವಕಾಶ ನೀಡಲು ಮುಂದಾಗಿರುವ ಸರ್ಕಾರ, ಇದಕ್ಕಾಗಿ ಶಿಕ್ಷಕರಿಗೆ ಮೂರು ಅಥವಾ ನಾಲ್ಕು ವರ್ಷ ಕಾಲಾವಕಾಶ ನೀಡುವ ಬಗ್ಗೆ ನಿಯಮಾವಳಿ ರೂಪಿಸಲು ಚಿಂತನೆ ನಡೆಸಿದೆ.

ವಿಧಾನಸೌಧದಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಇಲಾಖೆಯ ಹಿರಿಯ ಅಧಿಕಾರಿಗಳು, ವಕೀಲರೊಂದಿಗೆ ಚರ್ಚಿಸಿದ ಬಳಿಕ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಒಂಬತ್ತು ತಿಂಗಳ ಕೋರ್ಸ್‌ ಮುಗಿಸಿ ಈಗಾಗಲೇ ನೇಮಕಗೊಂಡಿರುವ ಸುಮಾರು ನಾಲ್ಕು ಸಾವಿರ ಇಂಗ್ಲಿಷ್‌ ಶಿಕ್ಷಕರ ಕುರಿತು ಹೈಕೋರ್ಟ್‌ ಆದೇಶದಂತೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದ್ದು, ಇಲ್ಲದಿದ್ದರೆ ನ್ಯಾಯಾಂಗ ನಿಂದನೆಗೆ ಗುರಿಯಾಗಬೇಕಾಗುತ್ತದೆ. ಆದರೆ, ಶಿಕ್ಷಕರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಇದಕ್ಕೆ ಬೇಕಾದ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

SCROLL FOR NEXT