ಬೆಂಗಳೂರು: ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದ ಪಿಎಸ್ ಐ ಮಲ್ಲಿಕಾರ್ಜುನ ಬಂಡೆ ಅವರ ಕುಟುಂಬಕ್ಕೆ ನೀಡಿದ್ದ ಭರವಸೆಯನ್ನು ಈಡೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಂಡೆಯವರ ತಂದೆ ಕರಿಬಸಪ್ಪ ಹಾಗೂ ವೀರಶೈವ ಲಿಂಗಾಯತ ಯುವ ವೇದಿಕೆ ನಗರದಲ್ಲಿ ನಿನ್ನೆ ಪ್ರತಿಭಟನೆ ನಡೆಸುತ್ತಿದ್ದ ವಿಷಯ ತಿಳಿದ ಮುಖ್ಯಮಂತ್ರಿಯವರು ತಮ್ಮ ಕಚೇರಿಗೆ ಕರಿಬಸಪ್ಪನವರನ್ನು ಕರೆಸಿಕೊಂಡು ಮಾಹಿತಿ ಪಡೆದುಕೊಂಡರು.
ಬಂಡೆಯವರ ಕುಟುಂಬಕ್ಕೆ ಈಗಾಗಲೇ 50 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ. ಅವರ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ಸರ್ಕಾರವೇ ಭರಿಸುತ್ತಿದೆ. ಸರ್ಕಾರ ನೀಡಿರುವ ಭರವಸೆಗೆ ಬದ್ಧವಾಗಿದ್ದು, ಅದರ ಪ್ರಕಾರ ನಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಮತ್ತೊಮ್ಮೆ ಸೂಚಿಸುವುದಾಗಿ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಬಂಡೆಯವರ ಪತ್ನಿ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದು,ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಅವರ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು ಎಂದು ವೀರಶೈವ ಲಿಂಗಾಯತ ಯುವ ವೇದಿಕೆಯ ನೇತೃತ್ವದಲ್ಲಿ ನಗರದಲ್ಲಿ ನಿನ್ನೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಕರಿಬಸಪ್ಪ ನನ್ನ ಮಗ ಮರಣ ಹೊಂದಿದ ಸಂದರ್ಭದಲ್ಲಿ ನಮ್ಮ ಕುಟುಂಬಕ್ಕೆ ಹಲವಾರು ಭರವಸೆಗಳನ್ನು ನೀಡಿತ್ತು. ಆ ಪೈಕಿ ಮಾಸಿಕ ವೇತನ ಎರಡು ವರ್ಷಗಳು ಕಳೆದರೂ ಸಿಕ್ಕಿಲ್ಲ. ಇದಕ್ಕಾಗಿ ಸರ್ಕಾರಿ ಕಚೇರಿಗೆ ಎಷ್ಟೇ ಅಲೆದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.