ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದುಬಾರಿ ವಾಚ್ ಎಲ್ಲಿಂದ ಸಿಕ್ಕಿತು, ಅದನ್ನು ಉಡುಗೊರೆಯಾಗಿ ನೀಡಿದ್ದವರು ಯಾರು ಎಂಬಿತ್ಯಾದಿ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದಾರೆ. ಈ ಮೂಲಕ ಸಿದ್ದರಾಮಯ್ಯನವರ ದುಬಾರಿ ವಾಚ್ ಪ್ರಕರಣವನ್ನು ಬಿಜೆಪಿ ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿದೆ.
ದೆಹಲಿಯ ಜಾರಿ ನಿರ್ದೇಶನಾಲಯ ನಿರ್ದೇಶಕ ಕರ್ನಾಲ್ ಸಿಂಗ್ ಅವರಿಗೆ ಪತ್ರ ಬರೆದಿರುವ ಜೋಶಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಗೊರೆಯಾಗಿ ಪಡೆದಿದ್ದರು ಎಂದು ಹೇಳಲಾಗಿರುವ ವಾಚ್ ಪ್ರಕರಣದ ಬಗ್ಗೆ ಸಾಕಷ್ಟು ಅನುಮಾನಗಳಿದ್ದು ತನಿಖೆ ನಡೆಸಿ ಕಾನೂನು ಉಲ್ಲಂಘನೆಯಾಗಿದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ವಾಚ್ ಕುರಿತಂತೆ ನಾನಾ ವ್ಯಾಖ್ಯಾನಗಳು ಬರುತ್ತಿರುವುದರಿಂದ ರಾಜ್ಯದ ಜನತೆಯ ಹಿತದೃಷ್ಟಿಯಿಂದಲೂ ವಾಚ್‌ನ ಮೂಲ ಕುರಿತು ಸತ್ಯಾಂಶ ಗೊತ್ತಾಗಬೇಕಿದೆ. ಆದಷ್ಟು ಬೇಗ ಪ್ರಕರಣದ ತನಿಖೆ ನಡೆಸಬೇಕು ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.