ಜಿಲ್ಲಾ ಸುದ್ದಿ

ವಿಶ್ವಕರ್ಮರಿಗೆ ರಾಜಕೀಯ ಪ್ರಾತಿನಿಧ್ಯ ಬೇಕು: ಡಾ. ಜಿ.ಪರಮೇಶ್ವರ್

Sumana Upadhyaya

ಬೆಂಗಳೂರು: ವಿಶ್ವಕರ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕಾದ  ಅಗತ್ಯವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಪ್ರತಿಪಾದಿಸಿದ್ದಾರೆ.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ನಗರದಲ್ಲಿ ಆಯೋಜಿಸಿದ್ದ 3ನೇ ರಾಜ್ಯ ಮಟ್ಟದ ಅಮರಶಿಲ್ಪಿ ಜಕಣಾಚಾರಿಯವರ ಸಂಸ್ಮರಣಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜಕೀಯ ಪ್ರಾತಿನಿಧ್ಯ ನೀಡುವ ಸಂಬಂಧ ಸಿಎಂಗೆ ಮನವರಿಕೆ ಮಾಡುವಂತೆ  ವೇದಿಕೆಯಲ್ಲಿದ್ದ ಮುಖ್ಯಮಂತ್ರಿಗಳ ಆಪ್ತ ಸಿಎಂ ಇಬ್ರಾಹಿಂಗೆ ಸೂಚಿಸಿದರು.

ತಾನು ರಾಜಕೀಯವಾಗಿ ಶಿಲ್ಪಿಯಾಗಿದ್ದು, ರಾಜಕಾರಣಿ ಮೂರ್ತಿಗಳನ್ನು ಮಾಡುತ್ತೇನೆ ಎಂದು ಇಬ್ರಾಹಿಂ ಹೇಳುತ್ತಾರೆ. ಆ ಮೂರ್ತಿಗಳಿಗೆ ಒಳ್ಳೆಯ ಆಶಿರ್ವಾದ ನೀಡುವುದನ್ನು ಸ್ವಲ್ಪ  ಳಬೇಕು. ಸುಮ್ಮನೆ ಕೂರುವುದಕ್ಕೆ ಬಿಡಬಾರದು ಎಂದರು. ಶ್ರೇಣೀಕೃತ ವ್ಯವಸ್ಥೆಯಲ್ಲಿ  ವಿಶ್ವಕರ್ಮ ಜನಾಂಗ ಶೋಷಣೆಗೆ ಒಳಗಾಗಿದ್ದಾರೆ. ಸಮುದಾಯದಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಅತೀ ವಿರಳವಾಗಿದೆ. ಅವರಿಗೆ ರಾಜಕೀಯ ಸ್ಥಾನಮಾನ ನೀಡಬೇಕಾದದ್ದು  ನಮ್ಮ ಕರ್ತವ್ಯವಾಗಿದೆ. ಈ ವಿಷಯದಲ್ಲಿ ಹಿಂದೆ ತಪ್ಪಾಗಿದ್ದು, ಆ ತಪ್ಪನ್ನು ತಿದ್ದಿಕೊಳ್ಳುವ ಸಮಯ  ಈಗ ಬಂದಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್, ವಿಶ್ವಕರ್ಮ  ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸಿರುವ ನಂಜುಂಡಿಯವರನ್ನು  ಫೆಬ್ರವರಿಯಲ್ಲಿ  ಖಾಲಿಯಾಗಲಿರುವ ವಿಧಾನ ಪರಿಷತ್ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಬೇಕು ಎಂದು  ಆಗ್ರಹಿಸಿದರು.

ಮಗುವಿಗೆ ಶಿಕ್ಷಣ ನೀಡಿ: ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ  ಮಾತನಾಡಿ, ರಾಜ್ಯದಲ್ಲಿ ಮುಜರಾಯಿ ಇಲಾಖೆಯಲ್ಲಿ ಅರ್ಚಕ ವೃತ್ತಿ  ಮಾಡುತ್ತಿರುವವರ  ಒಬ್ಬ ಮಗುವಿಗೆ ಶಿಕ್ಷಣ ನೀಡುವಂತಹ ಯೋಜನೆಯನ್ನು ಮುಂದಿನ  ಬಜೆಟ್‍ನಲ್ಲಿ ಸೇರಿಸುವಂತಾಗಬೇಕು. 2016ರ ವರ್ಷ ವಿಶ್ವಕರ್ಮ ಜನಾಂಗಕ್ಕೆ ಉತ್ತಮ ಭವಿಷ್ಯ ರೂಪಿ  ಸಲಿದೆ. ಈ ವರ್ಷ ಈ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ಸಿಗಲಿದೆ ಎಂದು ಭವಿಷ್ಯ   ನುಡಿದರು.

ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಮಾತನಾಡಿ, ಸರಗಳ್ಳತನ  ಪ್ರಕರಣಗಳಲ್ಲಿ  ಭಾಗಿಯಾದ ಆರೋಪಗಳಲ್ಲಿ ವಿಶ್ವಕರ್ಮ ಸಮುದಾಯದವರನ್ನು ಬಂಧಿಸುವ ಸಂದರ್ಭಗಳಲ್ಲಿ ಕುಟುಂಬಸ್ಥರಿಗೆ ಕಾರಣ ನೀಡಬೇಕು. ರಾಜ್ಯದ  ಯಾವುದಾದರೂ ವಿಶ್ವವಿದ್ಯಾಲಯಕ್ಕೆ ವಿಶ್ವಕರ್ಮ ಇಲ್ಲವೆ ಜಕಣಾಚಾರಿಯವರ ಹೆಸರಿಡಬೇಕು. ರಾಜ್ಯದ ಎಲ್ಲ  ನಗರಗಳಲ್ಲಿನ ದೇವಾಲಯಗಳಿರುವ ಪ್ರಮುಖ ವೃತ್ತಗಳಿಗೆ ಜಕಣಾಚಾರಿಯವರ  ಹೆಸರಿಡಬೇಕು ಎಂದು ಮನವಿ ಮಾಡಿದರು. 

ನಗರದ ಫ್ರೀಡಂ ಪಾರ್ಕ್ ನಿಂದ ರಾಜಾಜಿನಗರದ ರಾಮ ಮಂದಿರ ಮೈದಾನದವರೆಗೆ  ಸಮುದಾಯದ ಮಹಿಳೆಯರು ಪೂರ್ಣಕುಂಭ ಮೆರವಣಿಗೆ ನಡೆಸಿದರು.ಇದೇ ಸಂದರ್ಭದಲ್ಲಿ  ಸಮುದಾಯದ ಸುಮಾರು 1500 ಜನರನ್ನು ಸನ್ಮಾನಿಸಿಲಾಯಿತು.ವಿಶ್ವಕರ್ಮ ಸಮಾಜದ  ಅರವತ್ತೇಳು ಪೀಠಾಧಿಪತಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಮಠಾಧಿಪತಿಗಳ ಒಕ್ಕೂಟದ  ಅಧ್ಯಕ್ಷ ಕಾಳಹಸ್ತೇಂದ್ರ ಸ್ವಾಮಿಜಿಗಳು ಆಶಿರ್ವಚನ ಮಾಡಿದರು. ಎಐಸಿಸಿ ಕಾರ್ಯದರ್ಶಿ ಸೆಲ್ವಕುಮಾರ್, ಪತ್ರಕರ್ತರಾದ ವಿಶ್ವೇಶ್ವರ ಭಟ್, ರವಿ ಹೆಗಡೆ, ಎಚ್.ಆರ್.ರಂಗನಾಥ್   ಹಾಜರಿದ್ದರು. 

SCROLL FOR NEXT