ಬೆಂಗಳೂರು: ಬೆಂಗಳೂರು ನಗರ ಜಿಲ್ಲಾಡಳಿತವು ನಗರ ಮತ್ತು ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿಸಿದೆ. ಶನಿವಾರ ವಿವಿಧೆಡೆ ಕಾರ್ಯಾಚರಣೆ ನಡೆಸಿ ಸುಮಾರು ರು.240 ಕೋಟಿ ಮೌಲ್ಯದ ಒಟ್ಟು 26.13 ಎಕರೆ ಜಮೀನಿನ ಒತ್ತುವರಿ ತೆರವುಗೊಳಿಸಲಾಗಿದೆ.
ಜಿಲ್ಲಾಧಿಕಾರಿ ವಿ.ಶಂಕರ್ ನಿರ್ದೇಶನದ ಮೇರೆಗೆ ತಹಸೀಲ್ದಾರ್ ಶಿವಪ್ಪ ಎಚ್.ಲಮಾಣಿ ಬೆಂಗಳೂರು ಉತ್ತರ ತಾಲೂಕು, ದಾಸನಪುರ ಹೋಬಳಿ, ಮಲ್ಲಸಂದ್ರ ಗ್ರಾಮದ ಸರ್ಕಾರಿ ಗೋಮಾಳ ಜಾಗ ಸರ್ವೆ ನಂ.35 ರಲ್ಲಿ 1 ಎಕರೆ ಜಾಗ ಒತ್ತುವರಿದಾರರಿಗೆ ನೋಟಿಸ್ ನೀಡಿದ್ದಾರೆ. ಅದೇ ರೀತಿ ಬೆಂಗಳೂರು ಉತ್ತರ (ಅಪರ) ತಾಲೂಕು ಜಾಲ ಹೋಬಳಿ, ಶೆಟ್ಟಿಗೆರೆ ಗ್ರಾಮದ ಸರ್ಕಾರಿ ಗೋಮಾಳ ಜಾಗ ಸರ್ವೆ ನಂ. 79 ರಲ್ಲಿ 23 ಎಕರೆ ಜಾಗದ ಒತ್ತುವರಿದಾರರಿಗೆ ನೋಟಿಸ್ ನೀಡಿ ತಹಸೀಲ್ದಾರ್ ಬಾಲಪ್ಪ ಹಂದಿಗುಂದ ನೇತೃತ್ವದಲ್ಲಿ ಜಮೀನು ತೆರವುಗೊಳಿಸಲಾಯಿತು.
ಈ ಜಮೀನಿನ ಮೌಲ್ಯವನ್ನು ರು.230 ಕೋಟಿ ಎಂದು ಅಂದಾಜಿಸಲಾಯಿತು. ಬೆಂಗಳೂರು ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿ, ಮಾಳಿಗೊಂಡ ನಹಳ್ಳಿ ಗ್ರಾಮ ಸರ್ವೆ ನಂ.47 ರಲ್ಲಿ 23 ಗುಂಟೆ ಮಾರಯ್ಯನ ಕಟ್ಟೆ ಭೂಮಿ ಇದ್ದು ಈ ಜಮೀನನ್ನು ಸೂರ್ಯನಾರಾಯಣ ಒತ್ತುವರಿ ಮಾಡಿದ್ದು, ಒತ್ತುವರಿದಾರರಿಗೆ ತಹಸೀಲ್ದಾರ್ ಎಸ್.ಎಂ. ಶಿವಕುಮಾರ್ ನೋಟಿಸ್ ಜಾರಿ ಮಾಡಿ ರು.1 ಕೋಟಿ ಮೌಲ್ಯದ ಜಮೀನನ್ನು ತೆರವುಗೊಳಿಸಲಾಗಿದೆ.
ಇನ್ನು ಪೂರ್ವ ತಾಲೂಕು, ವರ್ತೂರು ಹೋಬಳಿ, ವರ್ತೂರು ಗ್ರಾಮದ ಸರ್ವೆ ನಂ. 74/1 ರಲ್ಲಿ 1.10 ಎಕರೆ ಜಾಗವು ಚೆನ್ನರಾಯಸ್ವಾಮಿ ದೇವಸ್ಥಾನಕ್ಕೆ ಸೇರಿದ ಜಾಗವನ್ನು ಒತ್ತುವರಿತೆರವುಗೊಳಿಸಲಾಗಿದೆ. ವೈಟ್‍ಫೀಲ್ಡ್ ಹೋಬಳಿ, ಪಟ್ಟಂದೂರು ಅಗ್ರಹಾರ ಗ್ರಾಮದ ಸರ್ಕಾರಿ ಗುಂಡುತೋಪು ಸರ್ವೆ ನಂ. 80ರಲ್ಲಿ 20 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದವರಿಗೆ ತಹಸೀಲ್ದಾರ್ ನೋಟಿಸ್ ನೀಡಿ, ಅಂದಾಜು ರು.5 ಕೋಟಿ ಮೌಲ್ಯದ ಭೂಮಿ ವಶಪಡಿಸಿಕೊಂಡಿದ್ದಾರೆ.