ಬೆಂಗಳೂರು: ಪೊಲೀಸರ ಸೋಗಿನಲ್ಲಿ ಹಣ ಸುಲಿಗೆ ಮಾಡಿದ್ದ ಪ್ರಕರಣ ಭೇದಿಸಿರುವ ತಲಘಟ್ಟಪುರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಮನಗರ ಜಿಲ್ಲೆ ನರಸಿಂಹಯ್ಯನ ದೊಡ್ಡಿ ನಿವಾರಿ ರಘು (29) ಮತ್ತು ಲಕ್ಷ್ಮೀಪುರ ಗ್ರಾಮದ ಗೋವಿಂದರಾಜು (43)ಬಂಧಿತರು. ಆರೋಪಿಗಳು ಡಿ.19ರಂದು ಸಂಜೆ 6.30ರ ಸುಮಾರಿಗೆ ನೈಸ್ ರಸ್ತೆಯ ಬನ್ನೇರುಘಟ್ಟ ಟೋಲ್ ಬಳಿ ಇಬ್ಬರು ಟೆಕ್ಕಿ ಗೆಳೆಯರಿದ್ದ ಕಾರು ಅಡ್ಡಗಟ್ಟಿ ಪೊಲೀಸರೆಂದು ಹೆದರಿಸಿ ಎಟಿಎಂನಿಂದ ರು.60 ಸಾವಿರ ಹಣ ಡ್ರಾ ಮಾಡಿಸಿಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾಚರಣೆಗೆ ಮುಂದಾದ ತಲಘಟ್ಟಪುರ ಪೊಲೀಸರು, ಜ.4ರಂದು ಆರೋಪಿಗಳನ್ನು ಕಗ್ಗಲಿಪುರದ ಬಳಿ ಬಂಧಿಸುವ ಮೂಲಕ ರು.52 ಸಾವಿರ ನಗದು, ಸ್ವಿಫ್ಟ್ ಕಾರು ಹಾಗೂ ಪೊಲೀಸ್ ಸಮವಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಎರಡು ಬಾರಿ ಜೈಲು: ಆರೋಪಿ ರಘು 2012ರಲ್ಲೂ ಸ್ನೇಹಿತರ ಜತೆಗೂಡಿ ಪೊಲೀಸರೆಂದು ಹೇಳಿಕೊಂಡು ರಾಮನಗರ ಗ್ರಾಮಾಂತರ ಮತ್ತು ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ಪ್ರೇಮಿಗಳನ್ನು ಹೆದರಿಸಿ ಹಣ ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಆರೋಪಿ ರಘುನನ್ನು ಬಂಧಿಸಿದ್ದ ಪೊಲೀಸರು ಬಳಿಕ ಜೈಲಿಗಟ್ಟಿದ್ದರು. ರಾಮನಗರ ಕಾರಾಗೃಹದಲ್ಲಿ 3 ತಿಂಗಳು ಮತ್ತು ನಗರದ ಕಾರಗೃಹದಲ್ಲಿ 7 ದಿನ ಶಿಕ್ಷೆ ಅನುಭವಿಸಿದ ಬಳಿಕ ಆರೋಪಿ ಜಾಮೀನು ಮೇಲೆ ಹೊರ ಬಂದಿದ್ದ ಎಂದು ಪೊಲೀಸರು ತಿಳಿಸಿದರು.
ರಾಮನಗರದಲ್ಲಿ ಹೋಂ ಗಾರ್ಡ್ ಆಗಿ ಕೆಲಸ ಮಾಡುವ ವೇಳೆ ಇದೇ ಮಾದರಿ ಪ್ರಕರಣದಲ್ಲಿ ಸಿಲುಕಿದ್ದ ರಘುನನ್ನು ಕೆಲಸದಿಂದ ತೆಗೆಯಲಾಗಿತ್ತು. ಬಳಿಕ ಹಾರೋಹಳ್ಳಿಯಲ್ಲಿ ಬಾಡಿಗೆ ಕಾರು ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಇತ್ತೀಚೆಗೆ ಆರೋಪಿ ಗೋವಿಂದರಾಜು ಮತ್ತು ಈತ ಸ್ನೇಹಿತರಾಗಿದ್ದರು. ಬಳಿಕ ಇಬ್ಬರು ಪೊಲೀಸರೆಂದು ಹೇಳಿಕೊಂಡು ನಗರದ ಹೊರವಲಯದಲ್ಲಿ ವಾಯು ವಿಹಾರಕ್ಕೆ ಬರುವ ಪ್ರೇಮಿಗಳು, ಗೆಳೆಯರನ್ನು ಹೆದರಿಸಿ ಸುಲಿಗೆ ಮಾಡುತ್ತಿದ್ದರು. ಡಿ.19ರಂದು ಟೆಕ್ಕಿಗಳ ಕಾರು ಅಡ್ಡಗಟ್ಟಿ ಆರೋಪಿಗಳು, ಅನೈತಿಕ ಚಟುವಟಿಕೆ ನಡೆಸುತ್ತಿದ್ದೀರಾ ಎಂದು ಹೆದರಿಸಿದ್ದರು. ಬಳಿಕ ತಲಘಟ್ಟಪುರಕ್ಕೆ ಕರೆದೊಯ್ದು ಎಟಿಎಂನಲ್ಲಿ ಹಣ ಬಿಡಿಸಿಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.