ಜಿಲ್ಲಾ ಸುದ್ದಿ

ಮೂಲಭೂತವಾದಿ ಗುಣ ತೊಲಗಲಿ

Manjula VN

ಬೆಂಗಳೂರು: ಸ್ವ ಜಾತಿಗಳಲ್ಲಿನ ಮೂಲಭೂತವಾದಿ ಗುಣ ತೊಲಗಿಸಿ, ಜಾತ್ಯತೀತ ಗುಣಗಳ ಮನೋಧರ್ಮ ಅಳವಡಿಸಿಕೊಳ್ಳಬೇಕಾಗಿದೆ ಎಂದು ಕನ್ನಡ ಪ್ರಾಧಿಕಾರ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ ತಿಳಿಸಿದರು.

ಸಂಕ್ರಮಣ ಪ್ರಕಾಶನ ಹೊರತಂದಿರುವ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅವರ ಕನ್ನಡ ಕವನಗಳ ಹಿಂದಿ ಅನುವಾದ `ಸೀತಾಯನ' ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಯಾವುದೇ ಜಾತಿ ಆಗಿರಲಿ. ಸಮಾಜದ ಹಿತದೃಷ್ಟಿಯಿಂದ ಈ ಜಾತಿಯೊಗಿನ ಮೂಲಭೂತ ಗುಣಗಳನ್ನು ತೊಲಗಿಸಬೇಕು ಎಂದು ಹೇಳಿದರು.

ಮಡಿವಂತಿಕೆ ಬಿಟ್ಟು ಎಲ್ಲ ವಿಧದ ವಸ್ತುಗಳನ್ನು ಸಾಹಿತ್ಯಕ್ಕೆ ಆಯ್ಕೆ ಮಾಡಿಕೊಂಡಿರುವ ಚಂಪಾ ಅವರಂತಹ ಸಾಹಿತಿಗಳು ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ, ದೇಶದೆಲ್ಲೆಡೆ ಅವರ ಸಾಹಿತ್ಯ ಪಸರಿಸಬೇಕು. ಇಲ್ಲವಾದಲ್ಲಿ ನಮ್ಮಲ್ಲಿನ ಪ್ರತಿಭೆಗಳು ಹೊರ ಜಗತ್ತಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಹಿಂದಿ ಸಾಹಿತ್ಯದಿಂದ ಹಲವಾರು ಕಾದಂಬ-ರಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಆದರೆ ಕನ್ನಡದಿಂದ ಹಿಂದಿಗೆ ಭಾಷಾಂತರಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಮತ್ತಷ್ಟು ಸಾಹಿತಿಗಳನ್ನು ಬೇರೆ ಬೇರೆ ಭಾಷೆಗಳಿಗೆ ಪರಿಚಯಿಸುವ ಕಾರ್ಯವಾಗಲಿ ಎಂದು ಸಲಹೆ ನೀಡಿದರು.ಚಂಪಾ ಅವರ ಸಾಹಿತ್ಯ ತುಂಬಾ ವರ್ಷಗಳ ಹಿಂದೆಯೇ ಅನುವಾದಗೊಳ್ಳಬೇಕಿತ್ತು.

ತಡವಾಗಿಯಾದರೂ ಹಿಂದಿಗೆ ಅನುವಾದಗೊಳ್ಳುತ್ತಿರುವುದು ಸಂತಸದ ವಿಷಯ. ನೆರೆ ರಾಜ್ಯಗಳ ಭಾಷೆಗಳಿಗೂ ಅನುವಾದ ಮಾಡುವ ಕೆಲಸವನ್ನು ಭಾಷಾ ಭಾರತಿ ಮಾಡಬೇಕಿದೆ. 1960ರಿಂದ 2010ರ ವರೆಗಿನ ಚಂಪಾ ಸಾಹಿತ್ಯ ಕುರಿತ ಅಧ್ಯಯನ ನಡೆಯಬೇಕಿದ್ದು, ಈ ರೀತಿಯ ಅಧ್ಯಯನಗಳನ್ನು ವಿಶ್ವವಿದ್ಯಾಲಯಗಳು ಕೈಗೆತ್ತಿಕೊಳ್ಳಬೇಕಿದೆ ಎಂದರು. ಕೃತಿ ಕುರಿತು ಡಾ.ಎಚ್.ವಿ. ರಾಮಚಂದ್ರರಾವ್ ಮಾತನಾಡಿದರು. ಕಾರ್ಯಕ್ರಮ ದಲ್ಲಿ ಅನುವಾದಕ ಪ್ರೊ. ಧರಣೇಂದ್ರ ಕುರಕುರಿ ಮತ್ತಿತರರು ಉಪಸ್ಥಿತರಿದ್ದರು.

SCROLL FOR NEXT