ಉಡುಪಿಯ ಪೇಜಾವರ ಮಠದ ಐತಿಹಾಸಿಕ ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ಭಾನುವಾರ ಕೃಷ್ಣಮಠದ ರಥಬೀದಿಯಲ್ಲಿ 5 ರಥಗಳ ಮಹಾರಥೋತ್ಸವ ವೈಭವದಿಂದ ನಡೆಯಿತು. ಕೃಷ್ಣಭಕ್ತರು ಈ ಅಪೂರ್ವ ಉತ್ಸವವನ್ನು
ಉಡುಪಿ: ಭಾನುವಾರ ರಾತ್ರಿ ಉಡುಪಿಯಲ್ಲಿ ಕತ್ತಲಾಗಲೇ ಇಲ್ಲ, ಇಲ್ಲಿನ ಜನರೂ ಮಲಗಲಿಲ್ಲ. ಶ್ರೀಕೃಷ್ಣ ಮಠ, ರಥಬೀದಿ, ಉಡುಪಿಯ ಬೀದಿಗಳು ವಿದ್ಯುತ್ ಬೆಳಕಿನಿಂದ ಝಗಮಗಿಸಿದವು. ನಗರದ ಜನರೆಲ್ಲರೂ ಮನೆ ಬಿಟ್ಟು ಬೀದಿಗೆ ಬಂದಿದ್ದರು. ಇಡೀ ನಗರವೇ ಕೃಷ್ಣ ಭಕ್ತಿಯಲ್ಲಿ ತೇಲಾಡಿತು.
ಪೇಜಾವರ ಮಠದ ಶ್ರೀವಿಶ್ವೇಶತೀರ್ಥರ 5ನೇ ಪರ್ಯಾಯೋತ್ಸವದಲ್ಲಿ ಕಂಡು ಬಂದ ವಾತಾವರಣವಿದು. ಭಾನುವಾರ ಸಂಜೆ 7 ಗಂಟೆಗೆ ರಥಬೀದಿಯಲ್ಲಿ ನಿರ್ಗಮನ ಪರ್ಯಾಯ ಪೀಠಾಧೀಶರಾದ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರಿಗೆ 2 ವರ್ಷ ಪರ್ಯಾಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ ಉಡುಪಿಯ ನಾಗರಿಕರ ಪರವಾಗಿ ಪೌರ ಸನ್ಮಾನ ಮಾಡಲಾಯಿತು.
ಪರ್ಯಾಯೋತ್ಸವಕ್ಕಾಗಿ ವಿವಿಧೆಡೆಯಿಂದ ಬಂದಿರುವ ಲಕ್ಷಾಂತರ ಮಂದಿಯ ಮನರಂಜನೆಗಾಗಿ ನಗರದ ಸುಮಾರು 10 ಪ್ರಮುಖ ವೃತ್ತಗಳಲ್ಲಿ ಸಂಗೀತ, ನೃತ್ಯ, ರಸಮಂಜರಿ ಕಾರ್ಯಕ್ರಮಗಳು ನಡೆದವು. ಸಿನಿಮಾ ನಟನಟಿಯರೂ ಆಗಮಿಸಿದ್ದರು. ಪಯಾರ್ಯೋತ್ಸವದಲ್ಲಿ ರಾಷ್ಟ್ರ ನಾಯಕರು ಪಾಲ್ಗೊಂಡಿರುವುದರಿಂದ ನಗರದಲ್ಲಿ ಪೊಲೀಸರು ಬಂದೋಬಸ್ತ್ ಬಿಗಿಗೊಳಿಸಿದ್ದಾರೆ.
ಜನರ ಉತ್ಸಾಹಉತ್ಸವಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಿದ್ದಾರೆ. ರಾಜ್ಯದೇಶ ಹಾಗೂ ವಿದೇಶಗಳಿಂದ ಪೇಜಾವರ ಶ್ರೀಗಳ ಅಭಿಮಾನಿಗಳು, ಪ್ರವಾಸಿಗರು ಪರ್ಯಾಯೋತ್ಸವನ್ನು ಕಣ್ತುಂಬಿಸಿಕೊಳ್ಳಲು ಆಗಮಿಸಿದ್ದಾರೆ.
ಅದ್ಧೂರಿ ಮೆರವಣಿಗೆ: ಮಧ್ಯರಾತ್ರಿ ಕಳೆಯುತ್ತಿದ್ದಂತೆ ಜನರು ನಗರದ ದಕ್ಷಿಣ ಭಾಗದಲ್ಲಿರುವ ಜೋಡು ಕಟ್ಟೆಯತ್ತ ಹೆಜ್ಜೆ ಹಾಕಿದರು. ನಸುಕಿನ 1.30 ಗಂಟೆಗೆ ಪೇಜಾವರ ಶ್ರೀಗಳು ಉಡುಪಿಯಿಂದ ಸುಮಾರು 20 ಕಿ.ಮೀ. ದೂರದ ದಂಡತೀರ್ಥಕ್ಕೆ ತೆರಳಿ ಪವಿತ್ರ ಸ್ನಾನ ಪೂರೈಸಿದರು. ಅಲ್ಲಿಂದ 1.50ಕ್ಕೆ ಜೋಡುಕಟ್ಟೆಗೆ ತೆರಳಿದರು. ಶ್ರೀಗಳನ್ನು ಅಷ್ಟ ಮಠಾಧೀಶರು ಸಾಂಪ್ರದಾಯಿಕವಾಗಿ ಬರ ಮಾಡಿಕೊಂಡರು. ನಂತರ ಭವ್ಯ ಪರ್ಯಾಯೋತ್ಸವದ ಮೆರವಣಿಗೆ ನಡೆಯಿತು.
ಪೇಜಾವರ ಶ್ರೀಗಳು ಒಂದು ದಿನವೂ ನಿಂತಲ್ಲಿ ನಿಲ್ಲದೆ ದೇಶ ಸಂಚಾರ ಮಾಡುವ ಸ್ವಾಮೀಜಿ ಎಂದೇ ಖ್ಯಾತರು. ಆದರೆ, ಇನ್ನು 2 ವರ್ಷ ಕಾಲ ಅವರು ಶ್ರೀಕೃಷ್ಣಮಠದಲ್ಲೇ ಇರಬೇಕು.
ಪೇಜಾವರ ಶ್ರೀಗಳಿಂದ ಶ್ರೀಕೃಷ್ಣ ಪೂಜೆ
ಸೋಮವಾರ ಮುಂಜಾನೆ 5.40ರ ಮುಹೂರ್ತದಲ್ಲಿ ಪೇಜಾವರ ಶ್ರೀಗಳ ಐತಿಹಾಸಿಕ 5ನೇ ಪರ್ಯಾಯೋತ್ಸವದ ಬಹುಮುಖ್ಯ ಆಚರಣೆಯಾದ ಕೃಷ್ಣನ ಪೂಜೆಯ ಸಂಕೇತವಾದ ಸರ್ವಜ್ಞ ಪೀಠಾರೋಹಣ ಮತ್ತು ಕೃಷ್ಣ ಮಠದ ಆಡಳಿತಾಧಿಕಾರದ ಸಂಕೇತವಾದ ಅಕ್ಷಯ ಪಾತ್ರೆಗಳನ್ನು ನಿರ್ಗಮನ ಮಠಾಧೀಶ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥರು ಪೇಜಾವರ ಶ್ರೀಗಳಿಗೆ ಹಸ್ತಾಂತರಿಸುತ್ತಾರೆ. ಜತೆಗೆ ತಮ್ಮ 5ನೇ ಪರ್ಯಾಯದ ಮೊದಲ ಶ್ರೀಕೃಷ್ಣ ಪೂಜೆಯನ್ನು ಮುಗಿಸುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos