ಬೆಂಗಳೂರು: ನಾಗರಬಾವಿ ವೃತ್ತದ ‘ಜಯಶ್ರೀ ಜ್ಯುವೆಲರ್ಸ್’ ಮಳಿಗೆಗೆ ಬಂದ ಮೂವರು ಮಹಿಳೆಯರು, ನೌಕರನ ಗಮನ ಬೇರೆಡೆ ಸೆಳೆದು ಎರಡು ಚಿನ್ನದ ಸರಗಳನ್ನು ಎಗರಿಸಿ ಪರಾರಿಯಾಗಿರುವ ಘಟನೆ ಮಂಗಳವಾರ ನಡೆದಿದೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಳಿಗೆಗೆ ಬಂದು, ಹೊಸ ವಿನ್ಯಾಸದ ಸರಗಳನ್ನು ತೋರಿಸುವಂತೆ ಕೇಳಿದ್ದಾರೆ. ಆಗ ನೌಕರ 10 ಸರಗಳಿರುವ ಟ್ರೇಯನ್ನು ಆ ಮಹಿಳೆಯರ ಮುಂದಿಟ್ಟಿದ್ದಾನೆ.
ಈ ಹಂತದಲ್ಲಿ ಒಬ್ಬಾಕೆ, ‘ಆ ಸರ ತೋರಿಸಿ, ಈ ಸರ ತೋರಿಸಿ’ ಎನ್ನುತ್ತ ನೌಕರನ ಗಮನ ಬೇರೆಡೆ ಸೆಳೆದಿದ್ದಾಳೆ. ಆಕೆ ತೋರಿಸಿದ ಸರಗಳನ್ನು ತೆಗೆಯಲು ನೌಕರ ತಿರುಗಿಕೊಳ್ಳುತ್ತಿದ್ದಂತೆಯೇ, ಒಬ್ಬಳು ಟ್ರೇಯಲ್ಲಿದ್ದ ಎರಡು ಸರಗಳನ್ನು ತೆಗೆದು ಹಿಂದೆ ನಿಂತಿದ್ದವಳಿಗೆ ಕೊಟ್ಟಿದ್ದಾಳೆ. ಆಕೆ ಅವುಗಳನ್ನು ಬ್ಯಾಗ್‌ನಲ್ಲಿ ಹಾಕಿಕೊಂಡಿದ್ದಾಳೆ.
ಹೀಗೆ 20 ನಿಮಿಷಗಳ ಕಾಲ ಸರ ನೋಡಿದ ಕಳ್ಳಿಯರು, ಎಲ್ಲ ಓಲ್ಡ್ ಮಾಡೆಲ್. ಯಾವುದೂ ಇಷ್ಟವಾಗುತ್ತಿಲ್ಲ. ಮತ್ತೆ ಎಂದಾದರೂ ಬರುತ್ತೇವೆ’ ಎಂದು ಹೊರಟು ಹೋಗಿದ್ದಾರೆ. ಆ ನಂತರ ನೌಕರ ಟ್ರೇಯನ್ನು ತೆಗೆದು ಒಳಗಿಟ್ಟಿದ್ದಾನೆ. ಬುಧವಾರ ಬೆಳಿಗ್ಗೆ ಇತರೆ ಗ್ರಾಹಕರು ಆಭರಣ ಖರೀದಿಗೆ ಬಂದಾಗ ನೌಕರ ಅದೇ ಟ್ರೇಯನ್ನು ಮುಂದಿಟ್ಟಿದ್ದಾನೆ. ಈ ಹಂತದಲ್ಲಿ ಹೊಸ ವಿನ್ಯಾಸದ ಎರಡು ಸರಗಳು ನಾಪತ್ತೆಯಾಗಿರುವುದು ಆತನ ಗಮನಕ್ಕೆ ಬಂದಿದೆ. ಈ ವಿಷಯವನ್ನು ಕೂಡಲೇ ಮಾಲೀಕ ಬೊಂಕೇಶ್ ಅವರಿಗೆ ತಿಳಿಸಿದ್ದಾನೆ. ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ಕಳ್ಳಿಯರ ಕೃತ್ಯ ಬಯಲಾಗಿದೆ.