ಜಿಲ್ಲಾ ಸುದ್ದಿ

ಗಣರಾಜ್ಯೋತ್ಸವ: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸರ್ಪಗಾವಲು

Srinivasamurthy VN

ಬೆಂಗಳೂರು: ಗಣರಾಜ್ಯೋತ್ಸವ ಆಚರಣೆಗೆ ಉಗ್ರರ ದಾಳಿ ಭೀತಿ ಇರುವುದರಿಂದ ಕಾರ್ಯಕ್ರಮ ನಡೆಯುವ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಭದ್ರತೆ ಹೆಚ್ಚಿಸಲಾಗಿದೆ  ಎಂದು ಬೆಂಗಳೂರು ಪೊಲೀಸ್ ಆಯುಕ್ತ ಎನ್ ಎಸ್ ಮೇಘರಿಕ್ ತಿಳಿಸಿದ್ದಾರೆ.

ಇಂದು ಮಾಣಿಕ್ ಷಾ ಪರೇಡ್ ಮೈದಾನಕ್ಕೆ ಭೇಟಿ ನೀಡಿದ ಮೇಘರಿಕ್ ಅವರು, ಭದ್ರತಾ ಮೇಲ್ವಿಚಾರಣೆಯನ್ನು ಪರೀಕ್ಷಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮಕ್ಕೆ ವ್ಯಾಪಕ ಭದ್ರತೆ ಒದಗಿಸಲಾಗಿದೆ. ಇತ್ತೀಚೆಗೆ ರಾಜ್ಯ ಹಾಗೂ ದೇಶದಲ್ಲಿ ಶಂಕಿತ ಉಗ್ರರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯುವ ಈ ಬಾರಿಯ ರಾಜ್ಯಮಟ್ಟದ ಗಣರಾಜ್ಯೋತ್ಸವ ದಿನಾಚರಣೆಗೆ ಅಭೂತಪೂರ್ವ ಭದ್ರತೆ ಕಲ್ಪಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮಕ್ಕಾಗಿ ನಗರದ ಎಲ್ಲಾ ವಿಭಾಗಗಳಿಂದ 9 ಡಿಸಿಪಿ, 16 ಎಸಿಪಿ, 48 ಪೊಲೀಸ್ ಇನ್ಸ್ ಪೆಕ್ಟರ್ ಗಳು, 101 ಪಿಎಸ್‍ಐ, 13 ಮಹಿಳಾ ಪಿಎಸ್‍ಐ, 77 ಎಎಸ್‍ಐ, 182 ಮುಖ್ಯ ಪೇದೆ, 459 ಪೊಲೀಸ್ ಪೇದೆ, 99 ಮಹಿಳಾ ಸಿಬ್ಬಂದಿ, 152 ಸಾದಾ ಉಡುಪಿನ ಅಧಿಕಾರಿ, ಸಿಬ್ಬಂದಿ ಸಹಿತ ಭದ್ರತೆಗೆ ಒಟ್ಟು 700ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ. ಇದಲ್ಲದೆ 6 ಕೆಎಸ್ಆರ್ ಪಿ, 2 ಕ್ಷಿಪ್ರ ಕಾರ್ಯಾಚರಣೆ ಪಡೆ ಹಾಗೂ ಇದೇ ಮೊದಲ ಬಾರಿಗೆ ಗರುಡಾ ಪಡೆ ಮತ್ತು ಭಾರತೀಯ ಸೇನೆಯ ಬಾಂಬ್ ನಿಷ್ಕ್ರಿಯ ದಳವನ್ನು ಭದ್ರತೆಗೆ ನಿಯೋಜಿಸಲಾಗಿದೆ. ಮೈದಾನದ ಸುತ್ತ ಎಲ್ಲಾ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ನಿಗಾವಹಿಸಲು 50 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಮೇಘರಿಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇನ್ನು ಭದ್ರತೆಯ ದೃಷ್ಟಿಯಿಂದ ಈ ಬಾರಿ ಬೆಂಗಳೂರಿನಲ್ಲಿ ಡ್ರೋಣ್ ಕ್ಯಾಮೆರಾಗಳನ್ನು ಬಳಕೆ ಮಾಡದಂತೆ ಆದೇಶ ಹೊರಡಿಸಲಾಗಿದ್ದು, ಡ್ರೋಣ್ ಕ್ಯಾಮೆರಾ ಸೇರಿದಂತೆ ಯಾವುದೇ ರೀತಿಯ ಮಾನವ ರಹಿತ ವಾಹನಗಳ ಬಳಕೆಯ ಮೇಲೆ ನಿಷೇಧ ಹೇರಿ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದರು.

ಅಂತೆಯೇ ಎಂದಿನಂತೆ ಈ ಬಾರಿಯೂ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯಸಿರುವ ಕಾರ್ಯಕ್ರಮಕ್ಕೆ ಬೀಡಿ, ಸಿಗರೇಟ್, ಬೆಂಕಿ ಪೆಟ್ಟಣ, ಕರಪತ್ರಗಳು, ಬಣ್ಣದ ದ್ರಾವಣಗಳು, ಕ್ಯಾಮರಾಗಳು, ನೀರಿನ ಬಾಟಲ್‍ಗಳು, ಶಸ್ತ್ರಾಸ್ತ್ರಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಇದಲ್ಲದೆ ಹರಿತವಾದ ವಸ್ತು, ಚಾಕು-ಚೂರಿಗಳು, ಕಪ್ಪು ಕರವಸ್ತ್ರಗಳು, ತಿಂಡಿ ತಿನಿಸುಗಳು, ಮದ್ಯದ ಬಾಟಲ್‍ಗಳು, ಮಾದಕ ವಸ್ತುಗಳು, ಬಾವುಟಗಳು, ಪಟಾಕಿ ಮತ್ತು ಸ್ಫೋಟಕ ವಸ್ತುಗಳನ್ನು ನಿಷೇಧಿಸಲಾಗಿದೆ ಎಂದು ಮೇಘರಿಕ್ ತಿಳಿಸಿದರು.

SCROLL FOR NEXT